ಬೆಳಗಾವಿ : ರಾಜಕೀಯ ಆರಂಭಿಸಿದ ದಿನದಿಂದಲೂ ನಾನು ದ್ವೇಷ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ಒಂದೇ ನಮ್ಮ ಮೂಲ ಮಂತ್ರ. ದ್ವೇಷ ರಾಜಕಾರಣ ನಮ್ಮ ಡಿಕ್ಷನರಿಯಲ್ಲೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ತಾಲೂಕಿನ ಮೋದಗಾ ಗ್ರಾಮ ಪಂಚಾಯತಿ ನೂತನ ಕಟ್ಟಡ ಉದ್ಘಾಟನೆ ಹಾಗೂ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಸಂಜೀವಿನಿ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಭಾರತ ದೇಶ ಹಳ್ಳಿಗಳ ದೇಶ, ಹಳ್ಳಿಗಳು ಸುಧಾರಿಸಿದರೆ ದೇಶ ಸುಧಾರಿಸಿದಂತೆ, ಹಳ್ಳಿಗಳಲ್ಲಿ ರೈತರು ಸುಧಾರಿಸಿದರೆ ದೇಶ ಅಭಿವೃದ್ಧಿಯಾದಂತೆ ಎಂದು ಗಾಂಧೀಜಿ ಹೇಳುತ್ತಿದ್ದರು. ಮಹಾತ್ಮ ಗಾಂಧಿ ಅವರ ಪರಿಕಲ್ಪನೆಯಡಿ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸುತ್ತಿರುವೆ. ಗ್ರಾಮಗಳ ಅಭಿವೃದ್ಧಿಯಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರೂ ಅಡಳಿತ ನಡೆಸಬೇಕು ಎಂಬ ದೃಷ್ಟಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಹಿಳೆಯರಿಗೆ ಶೇಕಡಾ 33% ಮೀಸಲಾತಿಯನ್ನು ಜಾರಿಗೆ ತಂದರು. ದೆಹಲಿಯಲ್ಲಿ ನಾನು ಒಂದು ರೂಪಾಯಿ ಬಿಡುಗಡೆ ಮಾಡಿದರೆ, ಅದು ನೇರವಾಗಿ ಗ್ರಾಮ ಪಂಚಾಯಿತಿಗೆ ಸೇರಬೇಕು ಎಂಬುದು ರಾಜೀವ್ ಗಾಂಧಿ ಅವರ ಪರಿಕಲ್ಪನೆಯಾಗಿತ್ತು. ದೇಶದಲ್ಲಿ ಗ್ರಾಮ ಪಂಚಾಯಿಗಳ ಸುಧಾರಣೆಗೆ ರಾಜೀವ್ ಗಾಂಧಿ ಅವರ ಕೊಡುಗೆ ಅಪಾರ ಎಂದರು.
ಸಮಾಜ ಸೇವೆ, ಗ್ರಾಮಗಳ ಅಭಿವೃದ್ಧಿಯೇ ನನ್ನ ಉದ್ದೇಶ. ದ್ವೇಷ ಮಾಡದೆ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಯಾರನ್ನೂ ದ್ವೇಷ ಮಾಡಿಲ್ಲ. ಊರಿಗೆ ಅಭಿವೃದ್ಧಿ ಕೆಲಸವಾಗಬೇಕು. ಜನರ ದುಡ್ಡನ್ನು ಜನರಿಗೇ ತಂದು ಅಭಿವೃದ್ಧಿ ಪಡಿಸುವ ಮನಸ್ಥಿತಿ ಬೇಕು ಎಂದು ಸಚಿವರು ಹೇಳಿದರು.
ಅಧಿಕಾರ ಇದ್ದಾಗ ಕೆಲಸ ಮಾಡೋಣ, ಜನರಿಗೆ ಸಹಾಯ ಮಾಡೋಣ. 2018ರಲ್ಲಿ ಶಾಸಕಿಯಾದ ನಂತರ ಉದ್ಯೋಗ ಖಾತ್ರಿ ಯೋಜನೆಯಲ್ಲಿ 180 ಶಾಲೆಗಳಿಗೆ ಕಂಪೌಂಡ್ ಹಾಕಿಸಿದ್ದೇನೆ. ಈ ರೀತಿ ಉದ್ಯೋಗ ಖಾತ್ರಿ ಯೋಜನೆಯನ್ನು ಶಾಲೆಗಳ ಕಂಪೌಂಡ್ ಗೋಡೆಗೆ ಬಳಸಿದ್ದು ರಾಜ್ಯದಲ್ಲೇ ಮೊದಲು. ನಂತರ ನಮ್ಮ ಮಾದರಿ ನೋಡಿ ಬೇರೆ ಕಡೆಯೂ ಆರಂಭಿಸಿದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಬಹಳ ವರ್ಷಗಳ ಕನಸು ಇಂದು ನನಸು: ಮೋದಗಾದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಸೇವಾ ಕೇಂದ್ರಗಳು ಆರಂಭಗೊಂಡಿದ್ದು ಖುಷಿಯ ವಿಚಾರ. ಇದೀಗ ಎಲ್ಲರ ಶ್ರಮದಿಂದ ಈ ಕನಸು ನನಸಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ.
ಈ ಕಟ್ಟಡದಿಂದ ಪ್ರತಿಯೊಬ್ಬ ಪ್ರಜೆಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಜಾತ್ರೆಯನ್ನು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸೇರಿ ಮಾಡೋಣ. ಗ್ರಾಮದ ಮುಖ್ಯ ರಸ್ತೆಯ ಕಾಮಗಾರಿ ಮಳೆಗಾಲ ಮುಗಿದ ಬಳಿಕ ಆರಂಭವಾಗಲಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಪರ್ವ ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ 2018ರಿಂದ ಆರಂಭವಾಗಿದೆ ಎಂದರು.
ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನದ ಕೆಲಸ ಆರಂಭವಾಗಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತುಮ್ಮರಗುದ್ದಿಯಲ್ಲಿ ಆರಂಭಿಸಲಾಗುವುದು. ಇನ್ನೂ ಹಲವಾರು ಯೋಜನೆಗಳನ್ನು ತರುವ ಪ್ರಯತ್ನ ನಡೆಯುತ್ತಿದೆ. ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಣಶಿಕಟ್ಟಿ ಹೊನ್ನಿಹಾಳ ಹಿರೇಮಠದ ಪ.ಪೂ ಶ್ರೀ ಶ್ರೀ ಬಸವರಾಜ ದೇವರು ಹಾಗೂ ಹುಕ್ಕೇರಿ ಕ್ಯಾರಗುಡ್ಡ ಇಂಚಗೇರಿ ಮಠದ ಪ.ಪೂ ಶ್ರೀಮದ್ ಅಭಿನವ ಮಂಜುನಾಥ ಮಹಾಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಕಟಬುಗೋಳ, ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ರಾ ತಳವಾರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುನವಳ್ಳಿ, ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ್ ಹೆಡಗೆ, ಶಂಕರಗೌಡ ಪಾಟೀಲ, ನಾಗೇಶ್ ದೇಸಾಯಿ, ಬಸವರಾಜ ಮ್ಯಾಗೋಟಿ, ಮಹೇಶ್ ಸುಗ್ನೆಣ್ಣವರ, ಸುರೇಶ್ ಕಟಬುಗೋಳ, ಕಾಜೇಸಾಬ್ ಯರಗಟ್ಟಿ, ಮೋದಗಾ ಗ್ರಾಮ ಪಂಚಾಯತ್ ನ ಸರ್ವ ಸದಸ್ಯರು ಹಾಗೂ ಆಡಳಿತ ಮಂಡಳಿ ಉಪಸ್ಥಿತರಿದ್ದರು.