ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಬೆಂಗಳೂರು ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳ ಸ್ಥಿತಿಗತಿ ಅಧ್ಯಯನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲು ಮುಂದಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಬೆಳಗಾವಿಯ ಹಿಂಡಲಗಾ ಜೈಲಿಗೆ ಭೇಟಿ ನೀಡಿದಾಗ ಕೆಲವು ಲೋಪದೋಷಗಳು ಕಂಡು ಬಂದಿತ್ತು, ಅವುಗಳನ್ನು ಸರಿಪಡಿಸಲಾಗಿದೆ. ಇದೀಗ ಎಲ್ಲಾ ಜಿಲ್ಲಾ ಕಾರಾಗೃಹಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಸಮಿತಿ ಸಲ್ಲಿಸುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ದರ್ಶನ್ ಅವರನ್ನು ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರವನ್ನು ಜೈಲು ಅಧಿಕಾರಿಗಳು ಯಾವುದೇ ಸರ್ಕಾರದ ಹಸ್ತಕ್ಷೇಪವಿಲ್ಲದೆ ತೆಗೆದುಕೊಂಡಿದ್ದಾರೆ. ಬೆಂಗಳೂರು ಕೇಂದ್ರ ಕಾರಾಗೃಹದ ಭದ್ರತಾ ಪರಿಸ್ಥಿತಿಯ ಕುರಿತು ಕೆಲವು ಬದಲಾವಣೆಗಳನ್ನು ಮಾಡಬೇಕಿದೆ. ಇನ್ನೂ ಕೆಲವು ಬ್ಯಾರಕ್‌ಗಳ ಜೊತೆಗೆ ಮೂರು ಮುಖ್ಯ ಬ್ಲಾಕ್‌ಗಳಿವೆ. ಇದನ್ನು ಇಬ್ಭಾಗ ಮಾಡಲು ಸಾಧ್ಯವಿಲಲ. ಆದರೆ, ಕೆಲವು ಬದಲಾವಣೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ರೌಡಿಶೀಟರ್ ‘ವಿಲ್ಸನ್ ಗಾರ್ಡನ್’ ನಾಗನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ತೆರಳಲು ಅವಕಾಶ ನೀಡಲಾಗಿದೆ. ಸೋಮವಾರ ಜೈಲಿಗೆ ಭೇಟಿ ನೀಡಿದಾಗ ಈ ವಿಚಾರ ಗಮನಕ್ಕೆ ಬಂದಿದೆ. ಇದೇ ದೃಶ್ಯ ಜೈಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಜೈಲಿನ ಮುಖ್ಯ ಅಧೀಕ್ಷಕರು ಸೇರಿದಂತೆ ಒಂಬತ್ತು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದರು.