ಕ್ವೆಟ್ಟಾ: ಬಂದೂಕುಧಾರಿಗಳು ಟ್ರಕ್ ಮತ್ತು ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ 23 ಜನರನ್ನು ಕೆಳಗಿಳಿಸಿ, ಅವರ ಜನಾಂಗೀಯತೆ ಪರಿಶೀಲಿಸಿ ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಭದ್ರತಾ ಪಡೆಗಳು, ಪಂಥೀಯ, ಜನಾಂಗೀಯ ಮತ್ತು ಪ್ರತ್ಯೇಕತಾವಾದಿ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಬಲೂಚಿಸ್ತಾನ್ ಪ್ರಾಂತ್ಯದ ಮುಸಾಖೈಲ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಈ ದಾಳಿ ನಡೆದಿದೆ. ದಾಳಿಕೋರರು ಘಟನಾ ಸ್ಥಳದಿಂದ ಪರಾರಿಯಾಗುವುದಕ್ಕೂ ಮುನ್ನ 10 ವಾಹನಗಳನ್ನು ಸುಟ್ಟುಹಾಕಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಪಾಕಿಸ್ತಾನದ ಪಂಜಾಬ್ನಿಂದ ಬಲೂಚಿಸ್ತಾನ್ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಭಯೋತ್ಪಾದಕರು, ಹಲವು ಬಸ್ಗಳು, ಟ್ರಕ್ ಮತ್ತು ವ್ಯಾನ್ಗಳನ್ನು ತಡೆದು ಕನಿಷ್ಠ 23 ಜನರು ಹತ್ಯೆ ಮಾಡಿದ್ದಾರೆ ಮತ್ತು 5 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ಗೆ ಕಡೆಗೆ ತೆರಳುವ ವಾಹನಗಳನ್ನು ಪರಿಶೀಲಿಸಿ, ಅದರಲ್ಲಿದ್ದ ಪಂಜಾಬ್ ಜನರನ್ನು ಗುರುತಿಸಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಪಂಜಾಬಿನ ಕಾರ್ಮಿಕರಾಗಿದ್ದಾರೆ” ಎಂದು ಮುಸಾಖೈಲ್ ಜಿಲ್ಲೆಯ ಹಿರಿಯ ಅಧಿಕಾರಿ ನಜಿಬುಲ್ಲಾ ಕಾಕರ್ ತಿಳಿಸಿದ್ದಾರೆ.
ಜಿಲ್ಲೆಯ ಮತ್ತೋರ್ವ ಹಿರಿಯ ಅಧಿಕಾರಿ ಹಮೀದ್ ಜೆಹ್ರಿ ಪ್ರತಿಕ್ರಿಯಿಸಿ, “ಘಟನೆಯ ಹಿಂದೆ ಬಿಎಲ್ಎ (ಬಲೂಚ್ ಲಿಬರೇಶನ್ ಆರ್ಮಿ) ಭಯೋತ್ಪಾದಕರು ಇದ್ದಾರೆ ಎಂದು ಮೇಲ್ನೋಟಕ್ಕೆ ತೋರುತ್ತದೆ” ಎಂದು ಶಂಕಿಸಿದ್ದಾರೆ.