ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ತಕ್ಷಣವೇ ಅದನ್ನು ಹಿಂಪಡೆದಿದೆ.
90 ವಿಧಾನಸಭಾ ಕ್ಷೇತ್ರಗಳಿಗೆ 3 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 44 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಇಂದು ಬೆಳಿಗ್ಗೆ ಘೋಷಿಸಿತ್ತು. ಅಭ್ಯರ್ಥಿಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಬಿಜೆಪಿ ಅದನ್ನು ತಕ್ಷಣವೇ ಡಿಲೀಟ್ ಮಾಡಿದೆ. ಹೊಸ ಪಟ್ಟಿ ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಈಗ ಡಿಲೀಟ್ ಮಾಡಲಾದ ಪಟ್ಟಿಯಲ್ಲಿ 3 ಪ್ರಮುಖ ಹೆಸರುಗಳು ಕಾಣೆಯಾಗಿವೆ. ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಮತ್ತು ಮಾಜಿ ಉಪಮುಖ್ಯಮಂತ್ರಿಗಳಾದ ನಿರ್ಮಲ್ ಸಿಂಗ್ ಮತ್ತು ಕವಿಂದರ್ ಗುಪ್ತಾ ಅವರ ಹೆಸರುಗಳು ಕಾಣೆಯಾಗಿದ್ದು. ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಸಹೋದರ ದೇವೇಂದ್ರ ರಾಣಾ ಅವರ ಹೆಸರು ಸಹ ಇತ್ತು. ಅವರು ನ್ಯಾಷನಲ್ ಕಾನ್ಫರೆನ್ಸ್ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಮೊದಲ ಪಟ್ಟಿಯಲ್ಲಿ ಇಬ್ಬರು ಕಾಶ್ಮೀರಿ ಪಂಡಿತರು 14 ಮುಸ್ಲಿಂ ಅಭ್ಯರ್ಥಿಗಳ ಹೆಸರೂ ಇತ್ತು. ಈಗ ಡಿಲೀಟ್ ಮಾಡಲಾದ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ನಾಯಕರ ಹೆಸರುಗಳ ಪೈಕಿ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಮತ್ತು ಪ್ಯಾಂಥರ್ಸ್ ಪಾರ್ಟಿಯ ಹಲವು ಮಾಜಿ ನಾಯಕರು ಪಕ್ಷ ಬದಲಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದ ನಾಯಕರ ಹೆಸರುಗಳೂ ಇದ್ದವು.