ಬೆಂಗಳೂರು, ಆಗಸ್ಟ್.26: ಕಳೆದ 25 ವರ್ಷಗಳಿಂದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ HMT ವಾರ್ಡ್ ನ ಆಶ್ರಯ ನಗರ ಸ್ಲಂನಲ್ಲಿ ವಾಸ ಮಾಡುತ್ತಿರುವ 3,500 ಕ್ಕೂ ಹೆಚ್ಚು ಕುಟುಂಬಗಳ ಆಕ್ರೋಶ ಭುಗಿಲೆದ್ದಿದೆ. ಸದ್ಯ ಇವರು ವಾಸ ಮಾಡುತ್ತಿರುವ ಪ್ರದೇಶದಲ್ಲಿ ಹೈ ಟೆನ್ಷನ್ ವೈರ್ ಗಳು ಹಾದು ಹೋಗಿದ್ದು, ವಾಸಕ್ಕೆ ಯೋಗ್ಯವಲ್ಲ, ಅಪಾಯಕಾರಿ ಎಂದು ಘೋಷಣೆ ಮಾಡಲಾಗಿದೆ. ಎಲ್ಲರೂ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಇದೇ ವಿಚಾರ ಇವರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಎಲ್ಲೋ ಜಾಗ ಇದೆ ನೀವು ಅಲ್ಲಿಗೆ ಹೋಗಿ ಅಂದರೆ ಹೇಗೆ? ನಮಗೆ ಸೂಕ್ತವಾದ ವ್ಯವಸ್ಥೆ ಮಾಡಬೇಕು, ಇಲ್ಲಿನ ರಾಜಕೀಯ ನಾಯಕರು ಯಾರು ಸರಿಯಿಲ್ಲ. ಎಲೆಕ್ಷನ್ ಟೈಮಲ್ಲಿ ಮತ ಹಾಕಿ ಅಂತ ಮಾತ್ರ ಕೇಳ್ತಾರೆ ಈಗ ಯಾರು ಬರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಶ್ರಯ ನಗರದ 7-8 ಎಕರೆ ಜಾಗದಲ್ಲಿ ಇವರೆಲ್ಲ ವಾಸ ಮಾಡುತ್ತಿದ್ದಾರೆ. ಈಗ ಗೌಡನ ಹಳ್ಳಿ ಎಂಬ ಕಡೆ 1 ಎಕರೆ ಜಾಗಕ್ಕೆ ನೀವೆಲ್ಲ ಹೋಗಬೇಕು ಅಂತ ಡಿಸಿ ಸೂಚನೆ ನೀಡಿದ್ದಾರೆ. ಇದು ಹೇಗೆ ಸಾಧ್ಯ? ಇಷ್ಟೊಂದು ಮಂದಿ 1 ಎಕರೆ ಜಾಗದಲ್ಲಿ ಹೇಗೆ ವಾಸ ಮಾಡೋದು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನಾವು 25 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೀವಿ, ಈಗ ಏಕಾಏಕಿ ಕರೆಂಟ್ ವೈರ್ ಇದೆ ಇಲ್ಲಿ ಯಾರು ಜೀವನ ಮಾಡಬಾರದು ಮನೆಗಳನ್ನು ಖಾಲಿ ಮಾಡಬೇಕು ಅಂದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗಲ್ಲ ಸರ್ಕಾರ ನಮಗೆ ಸೈಟ್ ನೀಡಬೇಕು ಎಂದು ಕಿಡಿಕಾರಿದ್ದಾರೆ.