ಢಾಕಾ: ತನ್ನ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ನವದೆಹಲಿಯಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಕರೆ ನೀಡಿದೆ. ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ 2013ರಲ್ಲಿ ಸಾಮೂಹಿಕ ಹತ್ಯೆ ಸೇರಿದಂತೆ ಹಲವಾರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಭಾರತದಲ್ಲಿಯೇ ಉಳಿದುಕೊಂಡು ಬಾಂಗ್ಲಾದೇಶದಲ್ಲಿ ಸಂಭವಿಸಿದ ಕ್ರಾಂತಿಯನ್ನು ತಡೆಯಲು ಶೇಖ್ ಹಸೀನಾ ನಾನಾ ಕುತಂತ್ರಗಳನ್ನು ಆರಂಭಿಸಿದ್ದಾರೆ ಎಂದು ಮಿರ್ಜಾ ಫಕ್ರುಲ್ ಆರೋಪಿಸಿದ್ದಾರೆ. ಜುಲೈ ಮಧ್ಯದಲ್ಲಿ ಸರ್ಕಾರಿ ಉದ್ಯೋಗಗಳ ವಿವಾದಾತ್ಮಕ ಕೋಟಾ ಪದ್ಧತಿಯ ವಿರುದ್ಧ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಬಾಂಗ್ಲಾದೇಶದಲ್ಲಿ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಹಿಂಸಾತ್ಮಕ ಸರ್ಕಾರಿ ವಿರೋಧಿ ಆಂದೋಲನಕ್ಕೆ ವೇಗವನ್ನು ನೀಡಿತು.