೨೧ನೆಯ ಶತಮಾನವನ್ನು ನಾವು ವಿಜ್ಞಾನ ತಂತ್ರಜ್ಞಾನದ ಯುಗವೆಂದು ಕರೆಯುತ್ತೇವೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಮೊಬೈಲ್?
ಯುಗವೆಂದು ಕರೆಯುತ್ತಿದ್ದೇವೆ. ಏಕೆಂದರೆ ಮೊಬೈಲ್ ಪ್ರಿಯವಾದಷ್ಟು ನಮಗೆ ಯಾವ ಸಾಧನವೂ ಪ್ರಿಯವಾಗುತ್ತಿಲ್ಲ! ಹೌದು. ಅದಕ್ಕೆ ಕಾರಣ ನಮಗೆಲ್ಲ ಚೆನ್ನಾಗಿ
ಗೊತ್ತೇ ಇದೆ ಅದನ್ನು ಮತ್ತೆ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ ಎಂಬುದು ನನ್ನ ಅಭಿಪ್ರಾಯ. ಅದರ ಆಕರ್ಷಣೆ ಯೇ ಹಾಗೆ ಇದೆ ಎಂದು ಅನಿಸುತ್ತದೆ. ಒಮ್ಮೆ ಅದರ ಮೋಹದ ಬಲೆಯಲ್ಲಿ ಬಿದ್ದರೆ ಸಾಕು ಮತ್ತೆ ಅದರಿಂದ ಬಿಡಿಸಿಕೊಂಡು ಹೊರ ಬರುವುದು ತುಂಬಾ ಕಷ್ಟ. ಅದರಿಂದಾಗುವ ಲಾಭವೇನು? ಮತ್ತು ನಷ್ಟವೇನು?
ಎಂಬ ಪ್ರಶ್ನೆಗೆ ಅದನ್ನು ಬಳಸುವವರಿಗೆ ಗೊತ್ತೇ ಇದೆ ಎನ್ನುವುದು ಹಲವರ ಅನಿಸಿಕೆ.
ಸಾವಿಲ್ಲದ ಸಾಸಿವೆ ತೆಗೆದುಕೊಂಡು ಬಾ ಎಂದು ಬುದ್ದನು ಒಂದು ಕಾಲದಲ್ಲಿ ಕಿಸಾ ಗೌತಮಿಗೆ ಹೇಳಿದ ಮಾತನ್ನು ನಾವಿಂದು ಅದೇ ದಾಟಿಯಲ್ಲಿ ಮೊಬೈಲ್ ಇಲ್ಲದಿರುವ ಮನೆಯನ್ನು ಅಥವಾ
ವ್ಯಕ್ತಿಯನ್ನು ಹುಡುಕಿಕೊಂಡು ಬಾ ಎಂದು ಹೇಳುವ ಪರಿಸ್ಥಿತಿಗೆ ಬಂದಿದ್ದೇವೆ. ಬಡವನಾದರೂ ಏನು ಪ್ರಿಯೇ ಕೈ ತುತ್ತು ತಿನಿಸುವೆ ಎಂಬ ಖ್ಯಾತ ಕವಿ ಸತ್ಯಾನಂದ ಪಾತ್ರೋಟ ಅವರ
ಕವಿತೆಯ ಸಾಲಿನಂತೆ ಇಂದು ನಾವು ಬಡವನಾದರೂ ಏನು ಪ್ರಿಯೆ ಮೊಬೈಲೊಂದನ್ನು ಕೊಡಿಸುವೆ ಎನ್ನುವ ಮನಸ್ಸುಗಳು ನಾವಾಗಿದ್ದೇವೆ ಅಲ್ಲವೇ? ಹೌದು. ಗಂಡ, ಹೆಂಡತಿ, ಮಕ್ಕಳು,
ಬಂಧು ಬಳಗ, ಸ್ನೇಹಿತರು, ಪ್ರೇಮಿಗಳು ಇಲ್ಲದಿದ್ದರೂ ಪರವಾಗಿಲ್ಲ ಆದರೆ ಎಲ್ಲರಿಗೂ ಮೊಬೈಲ್ ಬೇಕೇ ಬೇಕು. ಮನೆಯಿದ್ದರೇನು, ಮೊಬೈಲ್ ಇಲ್ಲದಿದ್ದಕ್ಕ ಎಂಬ ಮಾತನ್ನು
ಮುಂದಿಟ್ಟುಕೊಂಡಾಗ ಮನೆಯಿಲ್ಲದಿದ್ದರೂ ಚಿಂತೆಯಿಲ್ಲ ಮೊಬೈಲ್ ಇರಬೇಕು ಅನ್ನುತ್ತೇವೆ ಅಲ್ಲವೇ ?. ಮೊಬೈಲ್ ಇಲ್ಲದವರನ್ನೂ ಒಂದು ಕಾಲದಲ್ಲಿ ತೀರಾ ಬಡವರಂತೆ ನೋಡುತ್ತಿದ್ದರು. ಆದರೆ, ತೀರಾ ಬಡವರು ಎಂದು ಗುರುತಿಸಿಕೊಳ್ಳುವವರ ಕೈಯಲ್ಲಿ ನಾವಿಂದು ಸ್ಮಾರ್ಟ್ ಪೋನ್ ನೋಡಲು ಸಿಗುತ್ತದೆ. ಹೌದು ಮೊಬೈಲ್ ಶಕ್ತಿಯೇ ಅಂಥದ್ದು. ಒಂದು ಕಾಲಕ್ಕೆ
ಹೆಣ್ಣು, ಹೊನ್ನು, ಮಣ್ಣುಗಳ ಮೋಹಕ್ಕೆ ಸಿಕ್ಕವರ ಬಗ್ಗೆ ಮಾತ್ರ ಕೇಳುತ್ತಿದ್ದೇವು. ಇದನ್ನೇ ಅಲ್ಲಮ ಪ್ರಭುಗಳು ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ,
ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರ ನಿಮಗಾಗಿ ಸತ್ತವರನ್ನು ಯಾರನ್ನೂ ಕಾಣೆ ಎಂಬ ಮೋಹದ ಮರ್ಮವನ್ನು ಸುಂದರವಾಗಿ ಅಭಿವ್ಯಕ್ತಿಸಿದ ಪ್ರಸಂಗವನ್ನು ಮೊಬೈಲ್ ಮೋಹದ ಹಿನ್ನಲೆಯಲ್ಲಿ ಸ್ಮರಿಸಿಕೊಳ್ಳಬಹುದು.
ಇಂದು ನಾವೆಲ್ಲ ಮೊಬೈಲ್ ಎಂಬ ಮೋಹಕ್ಕೆ ಸಿಕ್ಕವರ ಕಥೆಯನ್ನು ಕೇಳುತ್ತಿದ್ದೇವೆ. ಆಶ್ಚರ್ಯವೆಂದರೆ ಹುಟ್ಟಿದ ಕೂಸಿಗೂ ಮೊಬೈಲ್ ಬೇಕಾಗಿದೆ. ಅಂದು ತಾಯಂದಿರು ಮಗುವನ್ನು ತೊಟ್ಟಿಲಲ್ಲಿ ಹಾಕಿ ಜೋಗುಳವನ್ನು ಹಾಡಿ ಮಲಗಿಸುತ್ತಿದ್ದರು. ಆದರೆ, ಇಂದಿನ ಮಕ್ಕಳಿಗೆ ತಾಯಿಯ ಜೋಗುಳಗಳು ನಿದ್ರೆ ತರಿಸುತ್ತಿಲ್ಲ. ಏಕೆಂದರೆ ಅವರಿಗೂ ಮೊಬೈಲ್ ಯೂಟ್ಯೂಬ್ ಗೀತೆಗಳೇ ಬೇಕಾಗಿವೆ. ಏಕೆ ಅಂತಿರಾ ಒಂಬತ್ತು ತಿಂಗಳು ಒಳಗೆ ಕುಳಿತು ಅದು ಹೆಚ್ಚು ಸಮಯ ಕಳೆದಿದ್ದು ತನ್ನ ತಾಯಿಯ ಜೊತೆ ಮಾತ್ರವಲ್ಲ, ಮೊಬೈಲ್ ಜೊತೆಗೂ ಎನ್ನುವಂತದ್ದು ಮರೆಯುವಂತಿಲ್ಲ. ಮೊಬೈಲ್ನಲ್ಲಿ ಹಾಡುಗಳನ್ನು ಹಚ್ಚಿ ಕೈಗೆ ಕೊಟ್ಟರೆ ಸಾಕು ಹುಣ್ಣಿಮೆ ಬೆಳದಿಂಗಳಿನಂತೆ ನಕ್ಕು ಬಿಡುತ್ತದೆ. ಅದನ್ನು ಕಸಿದು ಕೊಂಡರೆ ಸಾಕು ಚೀರಾಡಿ, ಬೋರಾಡಿ ಅತ್ತು ಬಿಡುತ್ತದೆ. ಇಲ್ಲಿಯೇ ಗೊತ್ತಾಗುತ್ತದೆ ಅಲ್ಲವೇ ಮೊಬೈಲ್ ಮರ್ಮ. ಇನ್ನೂ ಕೆಲವು ಮಕ್ಕಳಿಗೆ ಉಣಿಸುವಾಗ, ತಿನಿಸುವಾಗ ಒಂದಕ್ಕೆ ಎರಡಕ್ಕೆ ಮಾಡಿಸುವಾಗಲೂ ಕೂಡ ಮೊಬೈಲ್ ಕೈಯಲ್ಲಿರಬೇಕಾದ ಸನ್ನಿವೇಶಗಳನ್ನು ನಾವೆಲ್ಲ ನೋಡಿಲ್ಲವೇ?. ತಾಯಿಯ ಗರ್ಭದಲ್ಲಿದ್ದಾಗಲೇ ಆಗಾಗ ರಿಂಗ್ ಟೋನ್ ಕೇಳಿದ ಮಗು ಹೊರಗೆ ಬಂದ ಮೇಲೆ ಹೇಗೆ ಮೊಬೈಲ್ ಇಲ್ಲದೇ ಸುಮ್ಮನೆ ಇರಲು ಸಾಧ್ಯ ಎಂದು ಪ್ರಶ್ನಿಸುವವರ ಮಾತು ಸತ್ಯವೆನಿಸುತ್ತದೆ.
ದೂರದಲ್ಲಿರುವವರ ಜೊತೆ ಮಾತನಾಡಲು ಕಂಡುಹಿಡಿಯಲಾದ ಟೆಲಿಪೋನ್ ಇಂದು ತನ್ನ ರೂಪದಲ್ಲಿ ಬದಲಾವಣೆ ಮಾಡಿಕೊಂಡು ಅಂಗೈಗಲ ಜಂಗಮವಾಣಿಯಾಗಿ ಹತ್ತು ಹಲವಾರು ರೀತಿಯಲ್ಲಿ ಮಾನವನಿಗೆ ಅನುಕೂಲಕರವಾಗಿದೆ ಎಂದು ಸಂಭ್ರಮಪಡಬೇಕಾಗುತ್ತದೆ. ಏಕೆಂದರೆ, ಹಿಂದಿನಂತೆ ಒಂದು ಪತ್ರ ಬರೆದು ಯೋಗಕ್ಷೇಮ ವಿಚಾರಿಸಿ ಮರು ಉತ್ತರಕ್ಕಾಗಿ
ತಿಂಗಳಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ, ಇಂದು ಆ ತೊಂದರೆ ಇಲ್ಲ. ಕ್ಷಣಾರ್ಧದಲ್ಲಿಯೇ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಂಡು, ಮುಖಕ್ಕೆ ಮುಖ ತೋರಿಸಿ
ಬಿಡಬಹುದು. ದೇಶದಲ್ಲಿದ್ದರೇನು ಮತ್ತು ವಿದೇಶದಲ್ಲಿದ್ದರೇನು ಸಂಪರ್ಕಕ್ಕೆ ಯಾವ ಸಮಸ್ಯೆಯೂ ಇಲ್ಲ. ಗೂಗಲ್ ಪೇ, ಪೋನ್ ಪೇ, ಪೋಟೋ, ವಿಡಿಯೋ, ಆಡಿಯೋ, ಶೇರ್
ಚಾಟ್, ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ, ವಾಟ್ಸಆಫ್, ಮೆಸೇಜ್ ಬಾಕ್ಸ್, ಕ್ಯಾಲ್ಕೂಲೇಟರ್, ಅಲಾರಾಂ, ಟೈಂ, ಪೋನ್ ಗ್ಯಾಲರಿ, ಸ್ಕ್ಯಾನರ್? ಹೀಗೆ ಒಂದಾ ಎರಡಾ ನೂರಾರು ಪ್ರಯೋಜನ್ಗಳಿರುವುದು ನಮಗೆಲ್ಲ ಗೊತ್ತಿರುವ ಸಂಗತಿಯೇ ಸರಿ. ಈ ದಿನಮಾನಗಳಲ್ಲಿ ಮೊಬೈಲ್ ಇಲ್ಲದೆ ಬದುಕುವುದು ಎಂದರೆ ಕಣ್ಣಿಲ್ಲದೇ ಬದುಕಿದಂತೆ ಅನಿಸುತ್ತದೆ. ಇಂದು ಜಗತ್ತು ನಮೆಲ್ಲರ ಅಂಗೈಯಲ್ಲಿಯೇ ಇದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಏಕೆಂದರೆ ಜಗತ್ತಿನ ಸಕಲ ಸಂಪರ್ಕ ಮತ್ತು ಸುದ್ದಿಯನ್ನು ಅಲ್ಲಿಂದ ಪಡೆಯಬಹುದಾಗಿದೆ.
ಆದರೆ, ಅದರ ಬಳಕೆಯ ಇತಿಮಿತಿಯನ್ನು ಮೀರಿದಾಗ ನಮ್ಮಗರಿವಿಲ್ಲದಂತೆ ಆಗುತ್ತಿರುವ ನಷ್ಟಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳದಿರುವುದು ವಿಷಾದನೀಯ.
ತಮಗೆಲ್ಲ ಗೊತ್ತಿರುವಂತೆ ಮೊಬೈಲ್ ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಳಿ ಇರುವುದನ್ನು ಕಾಣುತ್ತೇವೆ. ಹಾಗಂತ ಅವರ ಬಳಿ
ಮೊಬೈಲ್ ಇರುವುದು ಸರಿಯಲ್ಲ ಎಂದು ಭಾವಿಸುವುದು ಸರಿಯಿಲ್ಲ. ಶಿಕ್ಷಣದ ನೆಪದಲ್ಲಿ ಎಷ್ಟರ ಮಟ್ಟಿಗೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆಂದು ಅವಲೋಕನ ಮಾಡದಿರುವುದು
ತಪ್ಪು ಎನಿಸುತ್ತದೆ. ಮೊದಲೆಲ್ಲಾ ಹೋಂ ವರ್ಕ್ ಮಾಡಬೇಕೆಂದರೆ ಹತ್ತಾರು ಪುಸ್ತಕಗಳು ಮುಂದಿರುತ್ತಿದ್ದವು . ಆದರೆ ಅವುಗಳ ಜಾಗದಲ್ಲಿ ಮೊಬೈಲ್ ಬಂದು ಕುಂತಿರುವುದು ಗೊತ್ತಿರುವ ಸಂಗತಿ. ಈಗಿನ ಕಾಲದಲ್ಲಿ ಮೊಬೈಲ್ ತುಂಬಾ ಅವಶ್ಯವೆನಿಸುತ್ತದೆ. ಏಕೆಂದರೆ, ಗೂಗಲ್ಗೆ ಹೋಗಿ ಸರ್ಚ್ ಮಾಡಿದರೆ ಎಲ್ಲಾ ಮಾಹಿತಿ ಸಿಕ್ಕಿ ಬಿಡುತ್ತದೆ!.
ಕಾಲೇಜು ಮಟ್ಟದ ಬಹಳಷ್ಟು ವಿದ್ಯಾರ್ಥಿಗಳು ಸ್ಮಾರ್ಟ್ ಪೋನ್ಗಳನ್ನು ಅಧ್ಯಯನದ ನೆಪದಲ್ಲಿ ಯಾವ ಕೆಲಸಕ್ಕಾಗಿ ಮತ್ತು ಎಷ್ಟು ಗಂಟೆ ಉಪಯೋಗಿಸುತ್ತಿದ್ದಾರೆ ಎಂಬೆಲ್ಲ
ಪ್ರಶ್ನೆಗಳು ಬಹಳ ಜನರನ್ನು ಕಾಡುತ್ತಿವೆ. ಕಾಲೇಜಿನಲ್ಲೂ, ಕ್ಲಾಸ್ ರೂಂ ನಲ್ಲೂ, ಬಸ್ ಸ್ಟಾಂಡ್ನಲ್ಲೂ ,ಬಸ್ಸನಲ್ಲೂ, ರೋಡ್ಲ್ಲೂ, ಟ್ರೇನ್ ಹಳಿಯಲ್ಲೂ, ಮೊಬೈಲ್ನಲ್ಲಿ ಮುಖವಿಟ್ಟುಕೊಂಡು
ಕುಳಿತರೆ ಅಥವಾ ಹೊರಟರೆ ಮುಗಿಯಿತು. ಮುಂದೆ ಬಾಂಬ್ ಬ್ಲಾಸ್ಟ್ ಅಥವಾ ಭೂಕಂಪವಾದರೂ ಅವರಿಗೆ ಗೊತ್ತೆ ಆಗುವುದಿಲ್ಲ. ಏಕೆಂದರೆ ಅವರು ಅದರಲ್ಲಿ ಅಷ್ಟೊಂದು ಬ್ಯೂಸಿ. ಮೊಬೈಲ್ ಎಂಬ ಮೋಹ ಹಾಗೆಯೇ!. ನಾವು ಕೈಬಿಟ್ಟರೂ ಅದು ನಮ್ಮನ್ನು ಕೈಬಿಡಲು ಇಷ್ಟಪಡುವುದಿಲ್ಲ. ಎಷ್ಟೋ ಜನ ವಿದ್ಯಾರ್ಥಿಗಳಿಗೆ ಓದಿ ಓದಿ ದೃಷ್ಟಿ ದೋಷ ಬರುತ್ತಿಲ್ಲ. ಮೊಬೈಲ್ ನೋಡಿ ನೋಡಿಯೇ ದೃಷ್ಟಿ ದೋಷ ಬರುತ್ತಿವೆ ಎಂದು ವೈದ್ಯರು ಹೇಳುವ ಮಾತುಗಳು ಇಂದು ಸತ್ಯವೆನಿಸುತ್ತಿವೆ.
ಎಷ್ಟರ ಮಟ್ಟಿಗೆ ನಾವು ಮೊಬೈಲ್ ದಾಸರಾಗಿದ್ದೇವೆ ಎಂದರೆ ಮಲಗಿಕೊಂಡಾಗ ಅದು ಮಗ್ಗಲಲ್ಲಿಯೇ ಇರಬೇಕು. ಇಲ್ಲವೇ ತಲೆದಿಂಬವೇ ಇರಬೇಕು ಎದ್ದಕೂಡಲೇ ಮೊದಲು
ಹುಡುಕುವುದು ಅದನ್ನೇ. ಕೆಲವೊಮ್ಮೆ ನಾವು ಬಾತ್ರೂಂಗೂ ತೆಗೆದುಕೊಂಡು ಹೋಗಿ ಅದಕ್ಕೂ ಸ್ಪಲ್ಪ ನೀರು ಮುಟ್ಟಿಸಿಕೊಂಡು ಬಂದಾಗಲೇ ಸಮಾಧಾನ. ಟಿಫೀನ್ ಮಾಡುವಾಗ,
ಲಂಚ್ ಮಾಡುವಾಗ, ರಾತ್ರಿ ಡಿನರ್ ಮಾಡುವಾಗ ಕೂಡ ಬಲಗೈಯಲ್ಲಿ ತಿನ್ನುತ್ತಾ, ಎಡಗೈ ಬೆರಳುಗಳಿಂದ ಅದನ್ನು ತಿಕ್ಕುತ್ತಲೇ ಇರುತ್ತೇವೆ. ಕುಟುಂಬಗಳಲ್ಲಿ ಮೊಬೈಲ್ ದಾಸರಾದ ನಾವು
ಪಾಲಕರಾಗಿ ಮಕ್ಕಳ ಕಡೆಗೆ ಗಮನ ಹರಿಸುತ್ತಿಲ್ಲ ಅದೇ ತೆರನಾಗಿ ಮಕ್ಕಳಾಗಿ ಪಾಲಕರ ಕಡೆಗೆ ಗಮನಹರಿಸುತ್ತಿಲ್ಲ. ನಮ್ಮ ನಮ್ಮ ಮೊಬೈಲ್ ಲೋಕದಲ್ಲಿ ಮುಳುಗಿಹೋಗುತ್ತಿದ್ದೇವೆ. ಹೀಗಾಗಿ ಪರಸ್ಪರ ಕಷ್ಟ ಸುಖ ಹಂಚಿಕೊಳ್ಳುವ ಮತ್ತು ಪರಸ್ಪರ ಸ್ನೇಹ ಪ್ರೀತಿಯನ್ನು ಹಂಚಿಕೊಂಡು ಬದುಕುವ ಕ್ರಮಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ
ಎನ್ನಬಹುದು. ಅತಿಯಾದ ಸಮಯದ ಮೊಬೈಲ್ ಬಳಕೆ ನಮ್ಮ ಪರಮ ಶತ್ರು ನಮ್ಮ ಎಲ್ಲ ಸಾಧನೆ ಮತ್ತು ಸಮಯವನ್ನು ವ್ಯರ್ಥ ಮಾಡಿ ಪ್ರಗತಿಗೆ ಕಡಿವಾಣ ಹಾಕುತ್ತಿದೆ. ಮೊಬೈಲ್
ಬಳಕೆಯಿಂದ ನಮ್ಮ ಬರವಣಿಗೆಯೂ ಮಂದಗತಿಯಲ್ಲಿ ಸಾಗಿದೆ, ಜ್ಞಾಪಕ ಶಕ್ತಿಯೂ ನಿಂತಲ್ಲೇ ನಿಲ್ಲುತ್ತದೆ ಈ ಎಲ್ಲ ಕಾರಣಗಳಿಗೆ ಉತ್ತರ ಮೊಬೈಲ್ನಲ್ಲಿಯೇ ಇದೆ ಎಂಬುದನ್ನು
ಗಮನಿಸಬೇಕಾದುದು ಪ್ರಮುಖ ಅಂಶ ಎಂಬ ವಿಚಾರವನ್ನು ಅರಿತಾಗ ಅದರ ಹಿತಮಿತ ಬಳಕೆಯ ಸದುಪಯೋಗ ಪಡೆಯಲು ಸಾಧ್ಯವೆಂಬುದು ಮನೋವಿಜ್ಞಾನಿಗಳ ಅಭಿಮತ.
ಅದನ್ನು ಮುಟ್ಟಲಿಲ್ಲ ಎಂದರೆ, ಅದರ ಮೇಲೆ ಬೆರಳುಗಳನ್ನಾಡಿಸಲಿಲ್ಲವೆಂದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅದಕ್ಕೆ ನಾವು ಹುಚ್ಚು ಹಿಡಿಸಿದ್ದೇವೋ ಅಥವಾ
ಅದುವೇ ನಮಗೆ ಹುಚ್ಚು ಹಿಡಿಸಿದೆಯೋ ದೇವರಿಗೆ ಗೊತ್ತು!. ಅಭ್ಯಾಸ ಮಾಡುತ್ತಿರುವ ಎಷ್ಟೋ ಹದಿಹರೆಯದ ಮಕ್ಕಳು ಇಂದು ಅಶ್ಲೀಲ ಚಿತ್ರಗಳನ್ನು ನೋಡುವತ್ತ ಅಭ್ಯಾಸ ಬೆಳೆಸಿಕೊಳ್ಳುತಿರುವುದು ಖೇಧದ ಸಂಗತಿ.
ಏಕೆಂದರೆ ಭವ್ಯ ಜೀವನವನ್ನು ರೂಪಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡಾಗ ದಾರಿ ತಪ್ಪುವ ಪ್ರಮಾಣ ಹೆಚ್ಚಾಗಿರುತ್ತದೆ. ಮೊಬೈಲ್ ದಾಸರಾದ
ಅದರಲ್ಲೂ ಇಂತಹ ಹವ್ಯಾಸಗಳತ್ತ ವಾಲಿದ ಯುವಜನತೆ ಕಾಮ ಪ್ರಚೋದನೆಗೆ ಒಳಗಾಗಿ ಪ್ರೀತಿ ಪ್ರೇಮಗಳ ಹೆಸರಿನಲ್ಲಿ ಸೊರಗಿ ವಿಕೃತ ಮನಸ್ಥಿತಿಗೆ ಬಂದು ನಿಲ್ಲುತ್ತಿರುವುದು
ಮೊಬೈಲ್ನಿಂದಾಗುವ ಗಂಭೀರ ಪರಿಣಾಮದ ಮತ್ತೊಂದು ಮುಖವಾಗಿದೆ ಎಂಬುದು ಬಹುಜನರ ಅಭಿಮತ. ನೀಲಿ ಚಿತ್ರಗಳನ್ನು ನೋಡುತ್ತಿರುವ ಯಾವುದೇ ವಯಸ್ಸಿನ ಮನಸ್ಸುಗಳು
ತಮ್ಮ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಂಡಾಗ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಹಾಗೂ ಹೀನಕೃತ್ಯಗಳು ಹೆಚ್ಚಾಗುತ್ತಿವೆ ಎನ್ನುವುದು ಅನೇಕರ ಅಭಿಪ್ರಾಯ. ಇತ್ತಿಚೀನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ಕಂಡಾಗ ಅವರ ಅಭಿಪ್ರಾಯವನ್ನು ನಾವು ಒಪ್ಪಲೇ ಬೇಕಾಗುತ್ತದೆ.
ಮೊಬೈಲ್ದಿಂದಾಗುವ ದುಷ್ಪರಿಣಾಮಗಳಲ್ಲಿ ಮತ್ತೊಂದು ಪ್ರಮುಖ ಸಂಗತಿ ಎಂದರೆ ಮೊಬೈಲ್ನಲ್ಲಿ ಕಂಡುಬರುವ ಹಲವು ವಿಡಿಯೋ ಗೇಮ್ಸ. ಎಷ್ಟೋ ಮಕ್ಕಳು ಅಭ್ಯಾಸದಲ್ಲಿ
ತೊಡಗಿಕೊಂಡು ಅಧ್ಯಯನವೂ ಇಲ್ಲದೇ ಆರೋಗ್ಯವೂ ಇಲ್ಲದೇ ಹಾಳಾಗುತ್ತಿರುವುದು ನಾವು ನೋಡುತ್ತಿದ್ದೇವೆ. ಪಾಲಕರು ಅಥವಾ ಪೋಷಕರು ಮಕ್ಕಳ ಕೈಯಿಂದ ಮೊಬೈಲ್
ಕಸಿದುಕೊಂಡಾಗ ಮಾನಸಿಕ ಖಿನ್ನತೆ ಒಳಗಾಗಿ ಹುಚ್ಚರಂತೆ ವರ್ತಿಸುವ ಪ್ರಕರಣಗಳು ಕಣ್ ಮುಂದಿನ ಸತ್ಯಗಳು. ಗೇಮ್ಗಳನ್ನು ನೋಡಿ ಅದೇ ತರನಾಗಿ ಗನ್ ಒಂದನ್ನು
ಎತ್ತಿಕೊಂಡು ಹೆತ್ತವರನ್ನೇ ಶೂಟ್ ಮಾಡಿ ಸಾಯಿಸಿದ ಮಕ್ಕಳ ಬಗ್ಗೆ ಕೇಳಿದಾಗ ಎದೆ ಝಲ್? ಎನ್ನುತ್ತದೆ. ಹೆಣ್ಣಾಗಲಿ, ಗಂಡಾಗಲಿ ಇದಕ್ಕೆ ಯಾವ ವಯಸ್ಸಿನ ಮಿತಿ ಇಲ್ಲ. ಒಮ್ಮೆ ಅದರ ಅತಿಯಾದ ಬಳಕೆಯ ರೋಗಕ್ಕೆ ಗುರಿಯಾದರೆ ಬೇಗ ಸುಧಾರಿಸಿಕೊಳ್ಳುವುದು ಬಲು ಕಷ್ಟ. ಒಮ್ಮೊಮ್ಮೆ ಬೆರಳುಗಳು ಮಲಗಿದಾಗಲು ತಮ್ಮಷ್ಟಕ್ಕೆ ತಾವೇ ನರ್ತನ
ಮಾಡುವುದನ್ನು ತಾವು ಗಮನಿಸಿರಬಹುದು.
ಮೊಬೈಲ್ನ್ನು ಎಷ್ಟು ಹಿತವಾಗಿ ಬಳಸುತ್ತೇವೆಯೋ ಅಷ್ಟು ಒಳ್ಳೆಯದು ಏಕೆಂದರೆ ಮೊಬೈಲ್ ರೇಡಿಯೇಷನ್ನಿಂದಾಗಿ ಪಕ್ಷಿ ಸಂಕುಲ ನಾಶವಾಗುತ್ತಿರುವುದು ಮತ್ತು ಮಾನವನಿಗೆ
ಅನೇಕ ಆರೋಗ್ಯ ತೊಂದರೆಗಳು ಕಂಡು ಬರುತ್ತಿರುವುದನ್ನು ಅರಿಯಬಹುದಾಗಿದೆ. ಇದನ್ನೇ ಅಕ್ಕಮಹಾದೇವಿಯ ವಚನದಂತೆ ನಾವು ಅರ್ಥೈಸಿಕೊಳ್ಳಬೇಕಾಗುತ್ತದೆ.
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನ್ನೇ ಸುತ್ತಿ ಸುತ್ತಿ ಸಾವ ತೆರನಂತೆ ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ. ಅಕ್ಕಮಹಾದೇವಿ ಮೊಬೈಲ್ ಎಂಬ ಮೋಹದ ಬಲೆಯಲ್ಲಿ ಬಿದ್ದು, ನಮ್ಮ ಸುಂದರ
ಜೀವನವನ್ನು ನಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ. ಮೊಬೈಲ್ ನಮ್ಮ ಸಾಧನೆಗೆ ಪೂರಕವಾಗಬೇಕೋ ಹೊರತು ನಮ್ಮ ಸಮಯ ವ್ಯರ್ಥಕ್ಕೆ
ಕಾರಣವಾಗಬಾರದು ಎಂಬ ನೀತಿಯನ್ನು ತುರ್ತಾಗಿ ತಿಳಿಯಬೇಕಾಗಿದೆ. ಈ ದಿಸೆಯಲ್ಲಿ ಸರ್ಕಾರ ಪ್ರಾಥಮಿಕ ಶಾಲೆಯಿಂದ ಪಿ.ಯು.ಸಿ ವರೆಗೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲು ಸೂಚಿಸುತ್ತಲೇ ಇರುತ್ತದೆ. ಆದರೆ, ಎಷ್ಟರ ಮಟ್ಟಿಗೆ ಅದು ಕಾರ್ಯರೂಪಕ್ಕೆ ಬಂದಿದೆ ಎಂಬುದನ್ನು ನಾವೆಲ್ಲ ವಿಚಾರ ಮಾಡಬೇಕಾಗಿದೆ. ಒಂದು ರೀತಿಯಲ್ಲಿ ಸರ್ಕಾರದ ಈ ಕ್ರಮವನ್ನು ಆಚರಣೆಗೆ ತರುವುದು ತುಂಬಾ ಕಷ್ಟವೆನಿಸುತ್ತದೆ. ಏಕೆಂದರೆ ಅದನ್ನು ಒಂದು ನಿಮಿಷವೂ ಬಿಟ್ಟು ಬದುಕುವ ಸ್ಥಿತಿಯಲ್ಲಿ ನಾವಿಲ್ಲ ಎಂಬುದು ನಮಗೆ ಗೊತ್ತು. ಆದರೂ ಸರ್ಕಾರದ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು. ಸರ್ಕಾರದ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಹೆಚ್ಚಾಗಿ ಪಾಲಕರು
ಮೊಬೈಲ್ ಬಳಕೆಯಲ್ಲಿ ಮಕ್ಕಳನ್ನು ನಿಯಂತ್ರಿಸಿಕೊಂಡು ಮುಂದೆ ಸಾಗಿದಾಗ ಉತ್ತಮ ಭವಿಷ್ಯ ರೂಪಗೊಳ್ಳಲು ಸಾಧ್ಯ.
ಡಾ. ಎಫ್.ಡಿ.ಗಡ್ಡಿಗೌಡರ
ವಿಮರ್ಶಕರು, ಬೈಲಹೊಂಗಲ
೬೩೬೧೩೫೭೧೧೬