ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ತೂಗದೀಪ್ ಅವರಿಗೆ ಮನೆ ಊಟಕ್ಕೆ ಕೋರಿದ್ದ ಮನವಿಯನ್ನು ತಿರಸ್ಕರಿಸಿರುವುದಾಗಿ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಮನೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿ ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿಯನ್ನು ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಹಾಜರಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಬೆಳ್ಳಿಯಪ್ಪ ಅವರು, ದರ್ಶನ್ ಅವರ ಊಟಕ್ಕಾಗಿ ಕೋರಿದ್ದ ಮನವಿಯನ್ನು ತಿರಸ್ಕರಿಸಿರುವುದಾಗಿ ವಿವರಿಸಿದರು. ಇದಕ್ಕೆ ದರ್ಶನ್ ಪರ ಹಾಜರಿದ್ದ ವಕೀಲರಾದ ಸಂಜೀವಿನಿ ಪ್ರಭುಲಿಂಗ ನಾವದಗಿ, ಮನೆ ಊಟ ತಿರಸ್ಕರಿಸಿರುವ ಆದೇಶದ ಪ್ರತಿ ಈವರೆಗೂ ನಮಗೆ ತಲುಪಿಲ್ಲ. ಆದೇಶ ಅಧ್ಯತನ ಮಾಡಿ ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅರ್ಜಿ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ, ದರ್ಶನ್ಗೆ ಅವರು ಮನೆ ಊಟಕ್ಕಾಗಿ ಸಲ್ಲಿಸಿರುವ ಮನವಿಯನ್ನು ಆಗಸ್ಟ್ 20ರೊಳಗೆ ನಿರ್ಧಾರ ಕೈಗೊಳ್ಳಳು ಸೂಚನೆ ನೀಡಿದೆ. ಇದೀಗ ಅರ್ಜಿಯನ್ನು ವಿಚಾರಣೆಗೆ ಕೈಗೊಂಡಿತ್ತು. ಅಲ್ಲದೆ, ನಿಜಕ್ಕೂ ಅರ್ಜಿದಾರರ ದರ್ಶನ್ ಆರೋಗ್ಯ ಕ್ಷೀಣಿಸಿದ್ದರೆ ಜೈಲಿನಲ್ಲಿ ವೈದ್ಯರು ಇದ್ದಾರೆ. ಅವರು ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದಾರೆ. ಇಲ್ಲಿ ದರ್ಶನ್ ಅಥವಾ ಬೇರಾವುದೇ ವಿಚಾರಣಾಧೀನ ಕೈದಿಯ ವಿಚಾರವಲ್ಲ. ನಾವು ಇಲ್ಲಿ ಪ್ರತ್ಯೇಕಿಸಿ ಹೇಗೆ ನೋಡಲಾಗುತ್ತದೆ? ಪ್ರತಿಯೊಬ್ಬ ವಿಚಾರಣಾಧೀನ ಕೈದಿಗಳೂ ಇಲ್ಲಿನ ಪ್ರಜೆಗಳೇ.. ವಿಚಾರಣಾಧೀನ ಅಥವಾ ದೋಷಿ ಎಂದು ಘೋಷಿತವಾದ ಕೈದಿಗಳ ವಿಚಾರ ಆ ಕಡೆ ಇರಲಿ. ನಮ್ಮಲ್ಲಿ ಕೋಟ್ಯಂತರ ವಿಚಾರಣಾಧೀನ ಕೈದಿಗಳಿದ್ದು, ಅವರಿಗೆ ಉತ್ತಮ ಆಹಾರ ಪದ್ಧತಿ ಬೇಕಿದೆ ಎಂದು ಪೀಠ ತಿಳಿಸಿತ್ತು.