ಬೆಂಗಳೂರು, ಆಗಸ್ಟ್ 20: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ವಾಗ್ದಾಳಿಗೆ ಪ್ರತಿಪಕ್ಷ ನಾಯಕ ಆರ್ ಅಶೋಕ ತಿರುಗೇಟು ನೀಡಿದ್ದಾರೆ. ದಲಿತ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ಗುರಿಯಾಗಿಸುತ್ತಿದ್ದಾರೆಯೇ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅಶೋಕ್ ಪ್ರಶ್ನಿಸಿದ್ದಾರೆ. ದಲಿತರನ್ನು ದ್ವೇಷಿಸುವ ಮತ್ತು ಗುರಿಯಾಗಿಸುವ ಸುದೀರ್ಘ ಇತಿಹಾಸವನ್ನು ಕಾಂಗ್ರೆಸ್ ಹೊಂದಿದೆ ಎಂದು ಅವರು ಟೀಕಿಸಿದ್ದಾರೆ.
ದಲಿತ ಎಂಬ ಕಾರಣಕ್ಕೆ ರಾಜ್ಯಪಾಲರನ್ನು ಕಾಂಗ್ರೆಸ್ ಗುರಿ: ದಲಿತ ದಾಳ ಉರುಳಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಸಂಬಂಧ ಪ್ಲಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರು ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದೇ ವೇಳೆ ಸಚಿವರಾದ ಕೃಷ್ಣಭೈರೇಗೌಡ, ಜಮೀರ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ರಾಜ್ಯಪಾಲರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಲ್ಲದೆ ನಿಂದಿಸಿದ್ದಾರೆ. ಇದರಿಂದ ಕೆರಳಿರುವ ಅಶೋಕ್ ಇದೀಗ ದಲಿತ ದಾಳ ಉರುಳಿಸಿದ್ದಾರೆ.