ಹಾವೇರಿ, ಆಗಸ್ಟ್ 16: ಭಾರತದಲ್ಲಿ ಮುಸ್ಲಿಮರು ಕೂಡ ಹಿಂದೂಗಳೇ ಎಂದು ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಹಿಂದೂಗಳೇ. ದೇಶ ಹಾಗೂ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಧರ್ಮಗಳು ಹುಟ್ಟುವ ಮೊದಲೇ ಇದ್ದಿದ್ದೇ ಹಿಂದೂ ಧರ್ಮ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲವೇ ಹಿಂದೂ ಧರ್ಮವಾಗಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವವರು ಸಹ ಹಿಂದೂಗಳೇ. ಹಿಂದೂ ಅಂದರೆ ಶುದ್ಧವಾದ ಜೀವನ ಪದ್ಧತಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಅಂದರೆ ಸತ್ಯ ಹಾಗೂ ಸನಾತನ ಎಂದು ಹೇಳಿದ್ದಾರೆ.
ಲಿಂಗಾಯತ ಇರಲಿ ವೀರಶೈವ ಇರಲಿ ಎಲ್ಲರೂ ಒಂದಾಗಿ ಹೋಗಬೇಕು. ಕೆಲವರ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಬೌದ್ಧ ಅಂತಾ ಇದೆ. ಹಿಂದೂ ಜೈನ ಅಂತ ಇದೆ, ಅದೇ ರೀತಿ ಹಿಂದೂ ಲಿಂಗಾಯತವೂ ಇದೆ. ವೀರಶೈವ ಹಾಗೂ ಲಿಂಗಾಯತರು ಎಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದಿದ್ದಾರೆ.
ನಾವು ಒಂದಾಗದೇ ಪ್ರತ್ಯೇಕ ಧರ್ಮ ಮಾಡಲು ಹೇಗೆ ಸಾಧ್ಯವಿದೆ? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ? ಕೆಲವು ಸ್ವಾಮೀಜಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ವಾ? ಹಾಗೇ ಹೇಳುವ ಸ್ವಾಮೀಜಿಗಳಿಗೆ ಸರ್ಟಿಫಿಕೇಟ್ ತೋರಿಸಲು ಹೇಳಿ. ಬಸವಣ್ಣ ಬ್ರಾಹ್ಮಣ, ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ಧಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯಿತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಾಗುತಿತ್ತು ಎಂದಿದ್ದಾರೆ.
ಕಲ್ಲು ನಾಗರಕ್ಕೆ ಹಾಲೆರೆಯಬೇಡಿ, ಅನಾಥ ಮಕ್ಕಳಿಗೆ ಕೊಡಿ ಅಂತಾರೆ. ಬೇಕಾದರೆ ಮಾಡಿಕೊಂಡು ಹೋಗಿ, ನಿಮ್ಮನ್ನು ಬೇಡ ಅಂದವರು ಯಾರು ಎಂದು ಪರೋಕ್ಷವಾಗಿ ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಟಾಂಗ್ ನೀಡಿದ್ದಾರೆ. ಹಾಲು ಕೊಡುವ ಗೋವುಗಳನ್ನೇ ಹತ್ಯೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟು ಜನ ಸ್ವಾಮೀಜಿಗಳು ಗೋಹತ್ಯೆ ವಿರೋಧಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.