ಮುಂಗಾರು ಮಳೆಯ ಮಧ್ಯೆಯೇ ಗಗನಕ್ಕೇರುತ್ತಿರುವ ತಾಪಮಾನ

Ravi Talawar
ಮುಂಗಾರು ಮಳೆಯ ಮಧ್ಯೆಯೇ ಗಗನಕ್ಕೇರುತ್ತಿರುವ ತಾಪಮಾನ
WhatsApp Group Join Now
Telegram Group Join Now

ಬೆಂಗಳೂರು, ಆಗಸ್ಟ್ 16: ಪ್ರಸಕ್ತ ಋತುವಿನಲ್ಲಿ ಮುಂಗಾರು ಮಳೆ ಜೋರಾಗಿಯೇ ಸುರಿಯುತ್ತಿದೆ. ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಆದರೂ, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆ ನಿಲ್ಲುತ್ತಿದ್ದಂತೆಯೇ ಸೆಕೆಯ ಅನುಭವವಾಗುತ್ತಿದೆ. ರಾಜ್ಯದಲ್ಲಿ ಮುಂಗಾರು ಮಳೆಯ ಮಧ್ಯೆಯೇ ತಾಪಮಾನವು ಗಗನಕ್ಕೇರುತ್ತಿರುವುದೇ ಇದಕ್ಕೆ ಕಾರಣ.

ಬೆಂಗಳೂರಿನಲ್ಲಿ ಆಗಸ್ಟ್ 15 ರಂದು ಗರಿಷ್ಠ ತಾಪಮಾನ 29.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಸಾಮಾನ್ಯವಾಗಿ ಇರುವ ತಾಪಮಾನಕ್ಕಿಂತ 1.4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಆಗಸ್ಟ್ 14 ರಂದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಸಾಮಾನ್ಯಕ್ಕಿಂತ 2.8 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಕನಿಷ್ಠ ತಾಪಮಾನ 22.5 ಡಿಗ್ರಿ ಸೆಲ್ಸಿಯಸ್ ಇತ್ತು. ಇದು, ಸಾಮಾನ್ಯಕ್ಕಿಂತ 2.4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಈ ತಿಂಗಳಿನ (ಆಗಸ್ಟ್) ಹವಾಮಾನ ಪರಿಸ್ಥಿತಿ ಬೆಂಗಳೂರಿನಲ್ಲಿ ಹಾಗೂ ರಾಜ್ಯ ಅನೇಕ ಕಡೆಗಳಲ್ಲಿ ಮೇ ತಿಂಗಳಿನಂತೆಯೇ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಎನ್ ಪುವಿಯರಸನ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಸೂರ್ಯನ ಪ್ರಖರ ಶಾಖವನ್ನು ಈ ತಿಂಗಳು ನಾವು ಗಮನಿಸಬಹುದು. ಗಾಳಿ, ಮೋಡ ಕಡಿಮೆಯಾಗಿದ್ದು ಆಕಾಶವು ಶುಭ್ರವಾಗಿ ಕಾಣಿಸುತ್ತಿದೆ. ತೇವಾಂಶ ಕೂಡ ಹೆಚ್ಚಾಗಿದೆ. ಆಗಸ್ಟ್​​ನಲ್ಲಿ ಮಳೆಯ ಪ್ರಮಾಣವೂ ಇಳಿಮುಖವಾಗಿದ್ದು, ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article