ಹುಬ್ಬಳ್ಳಿ: ಪರಿಶಿಷ್ಟ ಜಾತಿ ಒಳಮೀಸಲಾತಿ ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಕೆ ಹಾಗೂ ದೇಶದಾದ್ಯಂತ ಹೋರಾಟಕ್ಕೆ ರಾಜ್ಯ ಕೊರಮ, ಕೊರಚ, ಗೋವಿ, ಬಂಜಾರ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಮುಖಂಡ ಪಾಂಡುರಂಗ ಪಮ್ಮಾರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳನ್ನು ವಿಂಗಡಿಸಿ ಅದರಲ್ಲಿ ಒಳಮೀಸಲಾತಿ ಮಾಡಲು ಇತ್ತಿಚೆಗೆ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪಿಗೆ ನಮ್ಮ ವಿರೋಧವಿದ್ದು, ಅದಕ್ಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ ಜೊತೆಗೆ ದೇಶದಾದ್ಯಂತ ಈ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಮಾಯಾವತಿ, ಪಾಸ್ವಾನ್ ಸೇರಿದಂತೆ ಹಲವು ಮುಖಂಡರು ಇದರ ವಿರುದ್ದ ಧ್ವನಿ ಎತ್ತಿದ್ದು, ಈ ಕುರಿತು ಪತ್ರ ಚಳುವಳಿ, ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. 2023 ರಲ್ಲಿ ಎ.ಜೆ.ಸದಾಶಿವ ಆಯೋಗದ ಅವೈಜ್ಞಾನಿಕ ಅಸಂವಿಧಾನಿಕ ವರದಿಯನ್ನು ಸರ್ಕಾರ ರದ್ದುಪಡಿಸಿದ್ದು, ಇದೀಗ ಸುಪ್ರೀಂಕೋರ್ಟ್ ಒಳಮೀಸಲಾತಿಗೆ ಅಸ್ತು ಎಂದಿರುವುದು ಖಂಡನೀಯ. ಇದೆಲ್ಲದರ ವಿರುದ್ದ 9 ಜನ ನ್ಯಾಯಾಧೀಶರ ಮುಂದೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದರು.
ಈಗಾಗಲೇ ಆಂದ್ರ ಸರ್ಕಾರ ಒಳಮೀಸಲಾತಿ ಮಾಡಲು ಎಡವಿದ್ದು, ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸ್ಪಷ್ಟವಾಗಿ ಒಳಮೀಸಲಾತಿ ಮಾಡಲು ಅವಕಾಶವಿಲ್ಲ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಅಗಸ್ಟ್ 14 ರಂದು ಮಾದೀಗರ ವಿಜಯೋತ್ಸವಕ್ಕೆ ನಮ್ಮ ಸಂಘಟನೆಯ ಬೆಂಬಲ ಇರುವುದಿಲ್ಲ. ಪಂಜಾಬ್ ರಾಜ್ಯ ವಿರುದ್ಧ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರ ಜಾರಿಗೆ ತರಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್ ತೀರ್ಪು ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ದವಾಗಿದೆ. ಈ ಕುರಿತು ದೇಶವ್ಯಾಪಿ ಹೋರಾಟಗಳನ್ನು ಮಾಡಲಾಗುವುದು ಎಂದು ವಿವರಿಸಿದರು.
ಸುಪ್ರೀಂಕೋರ್ಟ್ ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಅಂಶವು ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಸ್ವಾಗತಾರ್ಹವಾಗಿದೆ ಎಂದರು.
ಸುಪ್ರೀಂಕೋರ್ಟ್ ತೀರ್ಪಿನ ಅಪಾಯಕಾರಿ ಅಂಶಗಳ ಕುರಿತಂತೆ ಕಾನೂನು ಹೋರಾಟ ಮತ್ತು ದೇಶವ್ಯಾಪಿ ಜನ ಚಳುವಳಿ ನಡೆಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಕಾಂತ್ ಬಿಜವಾಡ, ಪ್ರಕಾಶ ಕ್ಯಾರಕಟ್ಟಿ, ಭೀಮಣ್ಣ ರಜಪೂತ ಇದ್ದರು.