ಚನ್ನಮ್ಮನ ಕಿತ್ತೂರು: ಬಸವ ಪಂಚಮಿ ನಿಮಿತ್ತ ಮಾನವ ಬಂಧುತ್ವ ವೇದಿಕೆ ಹಾಗೂ ರಾಷ್ಟ್ರೀಯ ಬಸವ ದಳದ ವತಿಯಿಂದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ರೋಗಿಗಳಿಗೆ ಹಣ್ಣು ಮತ್ತು ಹಾಲು ವಿತರಣೆ ಮಾಡಲಾಯಿತು.
ಈ ವೇಳೆ ಶರಣ ಅಶೋಕ ಅಳ್ನಾವರ ಮಾತನಾಡಿ ತನ್ನ ಬಿಟ್ಟು ದೇವರಿಲ್ಲ ಮಣ್ಣು ಬಿಟ್ಟು ಮಡಿಕೆಯಿಲ್ಲ ಎಂಬ ವಿಶ್ವಗುರು ಬಸವಣ್ಣನವರ ವಚನದಂತೆ ಮಾನವರಲ್ಲಿ ಮಹಾದೇವನಿದ್ದಾನೆ ಕಲ್ಲು ಮತ್ತು ಮಣ್ಣಿನಿಂದ ಮಾಡಿದ ನಾಗಪ್ಪನಿಗೆ ಹಾಲು ಎರೆಯದೆ ಅಪೌಷ್ಠಿಕತೆಯಿಂದ ಬಳಲುವವರಿಗೆ ನೀಡಿದರೆ ಅನಕೂಲವಾಗುತ್ತದೆ. ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು ಎಲ್ಲ ಜನರಲ್ಲಿರುವ ಮೂಡನಂಬಿಕೆ ಮತ್ತು ಮೌಡ್ಯ ಆಚರಣೆಗಳನ್ನು ಹೋಗಲಾಡಿಸುತ್ತವೆ ಎಂದು ಹೇಳಿದ ಅವರು ದೇವರನ್ನು ಭಯದಿಂದ ಪೂಜೆ ಮಾಡದೆ ಭಕ್ತಿಯಿಂದ ಪೂಜಿಸಬೇಕು ಎಂದರು.
ಡಿ ಆರ್ ಪಾಟೀಲ ಮಾತನಾಡಿ ನಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಅದುವೆ ಪೂಜೆ ಅದಕ್ಕಾಗಿ ಬಸವಣ್ಣನವರು ಕಾಯಕವೆ ಕೈಲಾಸ ಎಂದು ಹೇಳಿದ್ದಾರೆ. ವೈಜ್ಞಾನಿಕವಾಗಿ ನೋಡಿದರೆ ಹಾವು ಹಾಲು ಕುಡಿಯುವುದಿಲ್ಲ ಆದರೂ ಕಲ್ಲು ಮತ್ತು ಮಣ್ಣಿನಿಂದ ಮಾಡಿದ ನಾಗಮೂರ್ತಿಗೆ ಹಾಲು ಎರೆದು ಹಾಲು ಹಾಳು ಮಾಡುಬ ಬದಲು ಅಪೌಷ್ಟಿಕತೆಯಿಂದ ಬಳಲುವ ಮಾನವರಿಗೆ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಾನವ ಬಂಧುತ್ವ ವೇದಿಕೆ ಚನ್ನಮ್ಮನ ಕಿತ್ತೂರು ತಾಲೂಕಾ ಘಟಕದ ಸಂಚಾಲಕ ಸಂದೀಪ ಕೆಳಗಿನಮನಿ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ ಇವರ ಮಾನವ ಬಂಧುತ್ವ ವೇದಿಕೆ ಸಮಾಜದಲ್ಲಿ ದೇವರ ಹೆಸರಿನಲ್ಲಿ
ಶ್ರೀಸಾಮಾನ್ಯರನ್ನು ಹಾಗೂ ಬಡವರನ್ನು ಶೋಷಣೆ ಮಾಡುವುದರ ವಿರುದ್ಧ ಸತತವಾಗಿ ಹೋರಾಟ ಮಾಡುತ್ತಾ
ಬಂದಿರುತ್ತಾರೆ. ಇವರ ಕೈ ಬಲಪಡಿಸಲು ನಾವೆಲ್ಲರು ಪಣ ತೊಡಬೇಕು ಎಂದು ಹೇಳಿದ ಅವರು ದೇವರ ಹೆಸರಿನಲ್ಲಿ ಹರಿದು ಹೋಗುವ ಹಾಲನ್ನು ತಡೆದು ಅವಶ್ಯಕತೆ ಇದ್ದವರಿಗೆ ಹಂಚುವಂತೆ ಮಾಡುವುದು ಬಸವ ಪಂಚಮಿಯ ಉದ್ದೇಶ ಎಂದರು.
ಕಾಂಗ್ರೇಸ್ ಮುಖಂಡ ಸಂಜೀವ ಲೋಕಾಪೂರ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ ಅವರು ಹಲವಾರು ವರ್ಷಗಳಿಂದ ಮೂಢನಂಬಿಕೆ ವಿರೋಧಿ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಚರಣೆ ಮಾಡುತ್ತಾ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಆಗುತ್ತಿರುವ ಶೋಷಣೆಗಳ ವಿರುದ್ಧ ಹೋರಾಟ ಮಾಡುತ್ತ ಬರುತ್ತಿದ್ದು ಅವರ ಕೂ ಬಲಪಡಿಸಲು ನಾವೆಲ್ಲರೂ ಕಂಕಣಬದ್ದರಾಗಬೇಕು ಎಂದರು.
ಈ ವೇಳೆ ನೂರಾರು ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಲಾಯಿತು. ಶರಣರಾದ ಶ್ರೀ ಮಡಿವಾಳೆಪ್ಪ ಕೋರಿಶೆಟ್ಟರ, ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಈಮಾಧ ರಾಜಗೋಳಿ, ಅನ್ನಪೂರ್ಣ ಅಂಗಡಿ ಹಾಗೂ ಸಿಬ್ಬಂದಿ, ಮಾನವ ಬಂದುತ್ವ ವೇದಿಕೆ ಪದಾಧಿಕಾರಿಗಳು, ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನೂ ಅನೇಕರು ಇದ್ದರು.