ನವದೆಹಲಿ, ಆಗಸ್ಟ್.07: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕರ್ನಾಟಕದಿಂದ ನಮಗೆ ಬರೋಬ್ಬರಿ 1,79,588 ಸೋಲಾರ್ ಪಂಪ್ ಅಳವಡಿಕೆಗೆ ಬೇಡಿಕೆ ಬಂದಿದೆ ಎಂದು ವಿವರಿಸಿದರು.
ವಿಫಲವಾಗಿದ್ರೆ ಬೇಡಿಕೆ ಏಕಿರುತ್ತಿತ್ತು? ವಿಪಕ್ಷದವರು ಪಿಎಂ ಕುಸುಮ್ ಯೋಜನೆ ಬಗ್ಗೆ ಇಲ್ಲ-ಸಲ್ಲದ ಮಾತನಾಡುತ್ತಾರೆ. ಹಾಗೊಂದು ವೇಳೆ ಈ ಯೋಜನೆ ವಿಫಲವಾಗಿದ್ದರೆ ಪ್ರಸ್ತುತ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ಸರ್ಕಾರದವರು ಏಕೆ ಅಧಿಕೃತವಾಗಿ ನಮಗೆ ಇಷ್ಟೊಂದು ಬೇಡಿಕೆ ಕಳುಹಿಸುತ್ತಿದ್ದರು? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಪಿಎಂ ಕುಸುಮ್ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಿದ್ದು, ಸ್ವತಂತ್ರ ಸೋಲಾರ್ ಪಂಪ್ಗಳ ಸ್ಥಾಪನೆಗೆ ರೈತರಿಗೆ ಹಣಕಾಸಿನ ನೆರವು ಕೂಡ ನೀಡಲಾಗಿದೆ. ರೈತರಿಗೆ ಇದು ಆಶಾದಾಯಕ ವಾಗಿದೆ. ಇನ್ನು, ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಗೆ ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜುಲೈ 2024ರವರೆಗೆ 1.30 ಕೋಟಿಗೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.