ಕೃಷಿಯೇತರ ಭೂಮಿಯ ನಿಯಮ ರದ್ದುಪಡಿಸಲು ಈರಣ್ಣ ಕಡಾಡಿ ಅಗ್ರಹ

Ravi Talawar
ಕೃಷಿಯೇತರ ಭೂಮಿಯ ನಿಯಮ ರದ್ದುಪಡಿಸಲು ಈರಣ್ಣ ಕಡಾಡಿ ಅಗ್ರಹ
WhatsApp Group Join Now
Telegram Group Join Now
ಬೆಳಗಾವಿ:  ಕೃಷಿ ಆಧಾರಿತ ಉದ್ಯಮ ಸ್ಥಾಪನೆಗೆ  ರೈತರ ಭೂಮಿಯನ್ನು ಕೃಷಿಯೇತರ (ಎನ್.ಎ) ಭೂಮಿಯಾಗಿ ಪರಿವರ್ತಿಸಬೇಕೆಂಬ ಪ್ರಸ್ತುತವಾಗಿರುವ ಷರತ್ತನ್ನು ರದ್ದುಪಡಿಸುವಂತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಳೆಗಾಲದ ಸಂಸತ್ತ ಅಧಿವೇಶನದಲ್ಲಿ ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ (ಪಿ.ಎಂ.ಎಫ್.ಎ.ಇ) ಯೋಜನೆ ಹಾಗೂ ಕೃಷಿ ಮೂಲಸೌಕರ್ಯಗಳ ನಿಧಿ (ಎ.ಐ.ಎಫ್) ಎಂಬ ಎರಡು ಯೋಜನೆಗಳನ್ನು ಜಾರಿಗೆ  ತಂದಿದ್ದಾರೆ.
 ಈ ಯೋಜನೆಯಡಿ ರೈತರು ತಾವು ಬೆಳೆದ ಆಹಾರ ಧಾನ್ಯಗಳನ್ನು ಕಿರು ಆಹಾರ ಸಂಸ್ಕರಣಾ ಘಟಕಗಳ ಮೂಲಕ ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯವನ್ನು ಪಡೆಯಬೇಕು ಎಂಬ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಹಾಗೂ ಇದರ ಜೊತೆಗೆ ರೈತ ಬೆಳದಂತಹ ಆಹಾರ ಧಾನ್ಯಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುವವರೆಗೆ ಸಂರಕ್ಷಿಸಿ ಇಟ್ಟುಕೊಳ್ಳಲು ಗೋದೊಮಗಳ ನಿರ್ಮಾಣ ಮಾಡುವುದು.
ತಮ್ಮ ಧವಸ ಧಾನ್ಯಗಳನ್ನು ವಿಂಗಡಣೆ ಮತ್ತು ಶ್ರೇಣೀಕರಣ ಮಾಡುವುದು.  ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಯಂತ್ರೋಪಕರಣಗಳನ್ನು ಒದಗಿಸುವುದು. ಈ ರೀತಿ ಹಲವಾರು ರೀತಿಯ ಸೌಲತ್ತುಗಳನ್ನು ಕೊಡುವ ಮೂಲಕ ರೈತರ ಬದುಕನ್ನು ಸುಗಮಗೊಳಿಸುವ ಮತ್ತು ಆದಾಯವನ್ನು ದ್ವಿಗುಣಗೊಳಿಸುವ ಕಾರಣದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಆದರೆ, ಈ ಯೋಜನೆಗೆ ಬ್ಯಾಂಕುಗಳು ಹಣಕಾಸಿನ ನೆರವನ್ನು ನೀಡುವ ಸಂದರ್ಭದಲ್ಲಿ ಕಿರು ಆಹಾರ ಸಂಸ್ಕರಣಾ ಘಟಕ ಮತ್ತು ಕೃಷಿ ಮೂಲಸೌಕರ್ಯಗಳ ನಿಧಿ ಈ ಎರಡು ಯೋಜನೆಗಳನ್ನು ಜಾರಿ ಮಾಡುವಾಗ ಇವುಗಳನ್ನು ಬ್ಯಾಂಕುಗಳು ಕಿರು ಉದ್ಯಮವಾಗಿ ಪರಿಗಣಿಸುತ್ತಿವೆ. ಬ್ಯಾಂಕುಗಳ ನಿಬಂಧನೆಯಂತೆ ರೈತ ತನ್ನ ಜಮೀನನ್ನು ಕೃಷಿಯೇತರ ಜಮೀನಾಗಿ ಪರಿವರ್ತನೆ ಮಾಡಿದಾಗ ಅದನ್ನು ಸ್ಥಳಿಯ ಪಂಚಾಯತಿಗಳಲ್ಲಿ ದಾಖಲು ಮಾಡಬೇಕಾಗುತ್ತದೆ. ಹೀಗೆ ದಾಖಲಾದ ಜಮೀನಿಗೆ ಸ್ಥಳಿಯ ಪಂಚಾಯತ ಆಡಳಿತ ಇವುಗಳನ್ನು ಒಂದು ಉದ್ಯಮವಾಗಿ ಪರಿಗಣಿಸಿ ಹೆಚ್ಚಿನ ಕರ (ಟ್ಯಾಕ್ಸ್) ಆಕರಣೆ ಮಾಡುವ ಸಂದರ್ಭವಿದೆ.
ಹೀಗಾಗಿ ಪಂಚಾಯತ ಆಡಳಿತ ವಿಧಿಸುವ ಕರ (ಟ್ಯಾಕ್ಸ್) ರೈತನಿಗೆ ಹೊರೆಯಾಗಲಿದೆ. ಒಂದು ವೇಳೆ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುವಲ್ಲಿ ರೈತ ವಿಫಲನಾದರೆ ಎನ್.ಎ ಆದ ಜಮೀನಗೆ ಖಾಯಂ ಆಗಿ ಕರ ತುಂಬಬೇಕಾಗುತ್ತದೆ ಅಥವಾ ಕೃಷಿಯೇತರ ಭೂಮಿಯನ್ನು ಪುನಃ ಕೃಷಿ ಭೂಮಿಯಾಗಿ ಮಾರ್ಪಡಿಸಲು ಸರ್ಕಾರಿ ಕಛೇರಿಗಳಿಗೆ ಅಲೆದಾಡಬೇಕಾಗುತ್ತದೆ.
ಕೃಷಿ ಸಂಬಂಧಿತ ಈ ಎಲ್ಲ ಚಟುವಟಿಕೆಗಳನ್ನು ಕಿರು ಉದ್ಯಮವಾಗಿ ಪರಿಗಣಿಸಲಾರದೆ ಇದು ಕೂಡ ಕೃಷಿ ಚಟುವಟಿಕೆಯ ಮುಂದುವರೆದ ಭಾಗವೆಂದು ಪರಿಗಣಿಸಿ ಕೃಷಿ ಜಮೀನಿನಲ್ಲಿ ಇಂತಹ ಚಟುವಟಿಕೆಗಳನ್ನು ಮಾಡಲು ಅವಕಾಶ ನೀಡಬೇಕು. ಯಾವುದೇ ರೈತ ತನ್ನ ಜಮೀನಿನ ಶೇ 10% ರಷ್ಟು ಭಾಗದಲ್ಲಿ ದನದ ಕೊಟ್ಟಿಗೆ ನಿರ್ಮಾಣ, ಬೆಲ್ಲ ತಯಾರಿಸಲು ಅಲೆಮನೆ ನಿರ್ಮಿಸುವ, ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ನಿರ್ಮಿಸುವ, ಆಹಾರ ಧ್ಯಾನಗಳನ್ನು ಸಂಗ್ರಹಿಸಲು ವೇರಹೌಸ್ ನಿರ್ಮಿಸುವ, ಧವಸ ಧಾನ್ಯಗಳ ವಿಂಗಡನೆ ಮತ್ತು ಶ್ರೇಣಿಕರಣ ಮಾಡುವುದರ ಜೊತೆಗೆ ಪ್ಯಾಕಿಂಗ್ ಮಾಡುವುದು ಈ ಎಲ್ಲ ಚಟುವಟಿಕೆಗಳು ಕೃಷಿಗೆ ಸಂಬಂಧಪಟ್ಟ ಮುಂದುವರೆದ ಭಾಗವೆಂದು ಪರಿಗಣಿಸಿ ಕೃಷಿ ಜಮೀನಿನಲ್ಲಿ ಕೂಡಾ ಇಂತಹ ಘಟಕಗಳಿಗೆ ಅವಕಾಶ ನೀಡಿದಾಗ ಇನ್ನೂ ಅತಿ ಹೆಚ್ಚು ರೈತರು ಸಹಜವಾಗಿ ಇದರ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬ್ಯಾಂಕುಗಳಿಗೆ ಸೂಕ್ತ ನಿರ್ದೆಶನ ನೀಡುವುದರ ಮೂಲಕ ಬಹುತೇಕ ರೈತರಿಗೆ ಇದರ ಲಾಭ ದೊರೆಯುವಂತೆ ಮಾಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಾವಿರಾರು ರೈತರ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಧಿವೇಶನದಲ್ಲಿ  ವಿನಂತಿಸಿದ್ದಾರೆ.
WhatsApp Group Join Now
Telegram Group Join Now
Share This Article