ಬಳ್ಳಾರಿ, ಆಗಸ್ಟ್.06: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಅವರ ಸಂಬಂಧಿಕರಿಗೆ ಇಡಿ ನೋಟಿಸ್ ನೀಡಿದೆ. ನೆಕ್ಕಂಟಿ ನಾಗರಾಜ್ ಮಾವ ವೆಂಕಟೇಶ್ವರ ರಾವ್ ಮನೆಗೆ ಇಡಿ ತಂಡ ಭೇಟಿ ನೀಡಿದ್ದು ವೆಂಕಟೇಶ್ವರ ರಾವ್ ಈಗಾಗಲೇ ಎಸ್ಐಟಿ ಕಸ್ಟಡಿಯಲ್ಲಿದ್ದಾರೆ.
ಇನ್ನು ಕೃಷ್ಣಾನಗರದ ಕ್ಯಾಂಪ್ನಲ್ಲಿರುವ ಸಂಬಂಧಿಕರಿಗೆ ವೆಂಕಟೇಶ್ವರ ರಾವ್ ಹಣ ವರ್ಗಾವಣೆ ಮಾಡಿಸಿದ್ದರು. ಶ್ರೀನಿವಾಸ ಎನ್ನುವವರು ಎಸ್ಐಟಿ ವಿಚಾರಣೆ ಹೋಗಿದ್ದು, ಹಣ ವಾಪಸ್ ನೀಡೋದಾಗಿ ಹೇಳಿದ್ದರು. ಇದೀಗ ನಿನ್ನೆ ಮತ್ತೊಮ್ಮೆ ಇಡಿ ಅಧಿಕಾರಿಗಳು ಕೃಷ್ಣಾನಗರದ ಕ್ಯಾಂಪ್ಗೆ ಭೇಟಿ ನೀಡಿ ನೋಟಿಸ್ ನೀಡಿದ್ದಾರೆ. ಹಣ ಹಿಂದಿರುಗಿಸದ ಬಗ್ಗೆ ಕಾರಣ ನೀಡುವಂತೆ ಇಡಿ ಮತ್ತೆ ನೋಟಿಸ್ ನೀಡಿದೆ.
ವಾಲ್ಮೀಕಿ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್ಐಟಿ, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಸೇರಿ 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದೆ.