ನವದೆಹಲಿ: ಬಾಂಗ್ಲಾದೇಶದಲ್ಲಿ ತಮ್ಮ ಸರ್ಕಾರ ಪತನದ ಬಳಿಕ ದೇಶ ತೊರೆದಿರುವ ಶೇಖ್ ಹಸೀನಾಗೆ ತಾತ್ಕಾಲಿಕ ಆಶ್ರಯ ನೀಡಲು ಭಾರತ ಸರ್ಕಾರ ಅವಕಾಶ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯುಕೆಯಲ್ಲಿ ಆಶ್ರಯ ಪಡೆಯುವವರೆಗೆ ಅವರು ಭಾರತದಲ್ಲಿ ಇರಲಿದ್ದು, ಎಲ್ಲಾ ರೀತಿಯ ಬೆಂಬಲ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಸೀನಾ ವಾಸ್ತವ್ಯ ತಾತ್ಕಾಲಿಕವಾಗಿರಲಿದೆ. ಬ್ರಿಟನ್ಗೆ ಸ್ಥಳಾಂತರವಾಗುವವರೆಗೆ ಅವರು ನವದೆಹಲಿಯಲ್ಲಿ ಇರಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಾಂಗ್ಲಾದೇಶದಲ್ಲಿ ತಮ್ಮ ಸರ್ಕಾರದ ವಿರುದ್ಧ ವ್ಯಕ್ತವಾದ ಭಾರೀ ಪ್ರತಿಭಟನಾ ಹಿಂಸಾಚಾರದ ಹಿನ್ನಲೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದಿದ್ದಾರೆ. ಅವರು ಲಂಡನ್ನಲ್ಲಿ ನೆಲೆಯೂರುವ ಚಿಂತನೆ ನಡೆಸಿದ್ದಾರೆ. ಆದರೆ, ಅವರಿಗೆ ರಾಜಕೀಯ ಆಶ್ರಯ ನೀಡುವ ಬಗ್ಗೆ ಯುನೈಟೆಡ್ ಕಿಂಗಡಮ್ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ದೃಢೀಕರಣ ಸಿಕ್ಕಿಲ್ಲ ಎನ್ನಲಾಗಿದೆ. ಅವರ ಸಹೋದರಿ ಯುಕೆ ಪೌರತ್ವ ಹೊಂದಿದ ಹಿನ್ನಲೆ ಅವರ ಜೊತೆಗೆ ನೆಲೆಸಲು ಬ್ರಿಟನ್ ಆಶ್ರಯ ಕೋರುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬಾಂಗ್ಲಾದೇಶದ ಪಿತಾಮಹ ಶೇಖ್ ಮಜಿಬುರ್ ರೆಹಮಾನ್ ಮತ್ತು ಶೇಖ್ ಫಜಿಲತುನ್ ನೆಚಾ ಮುಜಿಬ್ ಅವರ ಕಿರಿಯ ಮಗಳು ರೆಹನಾ ಶೇಖ್ ಹಸೀನಾ ಕಿರಿಯ ಸಹೋದರಿಯಾಗಿದ್ದಾರೆ. ಇವರ ಮಗಳು ಟುಲಿಪ್ ಸಿದ್ಧಿಕ್ ಬ್ರಿಟನ್ ಸಂಸತ್ನಲ್ಲಿ ಲೇಬರ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.