ಧರ್ಮಶಾಲಾ: ಹಿಮಾಚಲ ಪ್ರದೇಶದ 3 ಜಿಲ್ಲೆಗಳಲ್ಲಿ ಕಂಡುಬಂದ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಮಂಡಿ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಭಾನುವಾರ 4 ಮೃತದೇಹ ಪತ್ತೆಯಾಗಿದೆ. ಕಾಣೆಯಾದ 40ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಜುಲೈ 31ರ ರಾತ್ರಿ ಹಿಮಾಚಲ ಪ್ರದೇಶದ ಕುಲ್ಲುವಿನ ನಿರ್ಮಾಂಡ್, ಸೈಂಜ್ ಮತ್ತು ಮಲಾನಾ, ಮಂಡಿಯ ಪಧರ್ ಮತ್ತು ಶಿಮ್ಲಾದ ರಾಂಪುರ ಉಪವಿಭಾಗದಲ್ಲಿ ಸರಣಿ ಮೇಘಸ್ಫೋಟ ಸಂಭವಿಸಿತ್ತು. ಕಳೆದ ಐದು ದಿನಗಳಲ್ಲಿ ಉಂಟಾದ ಮೇಘಸ್ಫೋಟ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿನ ಒಟ್ಟು 87 ರಸ್ತೆಗಳ ಸಂಚಾರ ನಿರ್ಬಂಧಿಲಾಗಿದೆ.
ಯಂತ್ರೋಪಕರಣಗಳು, ಸ್ನಿಫರ್ ಶ್ವಾನದಳ, ಡ್ರೋನ್ ಮತ್ತು ಇತರ ಉಪಕರಣಗಳ ಮೂಲಕ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. ಶಿಮ್ಲಾ ಮತ್ತು ಕುಲ್ಲು ಗಡಿಯಲ್ಲಿರುವ ಸಮೇಜ್, ಧಾರಾ ಸರ್ದಾ ಮತ್ತು ಕುಶ್ವಾ ಎಂಬ ಮೂರು ಹಳ್ಳಿಗಳಲ್ಲಿ ದುರಂತ ಸಂಭವಿಸಿದಾಗಿನಿಂದ ವಿದ್ಯುತ್ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ವಿದ್ಯುತ್ ವ್ಯವಸ್ಥೆಯನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.