ಬೆಂಗಳೂರು: ಒಂದು ಕಡೆ ಪ್ರತಿಪಕ್ಷಗಳಿಂದ ʼಮೈಸೂರು ಚಲೋʼ ಪಾದಯಾತ್ರೆ ಮೂರನೇ ದಿನ ಪ್ರವೇಶಿಸುತ್ತಿದೆ. ಇನ್ನೊಂದೆಡೆ, ಒಂದು ವಾರದಿಂದ ದೆಹಲಿಯಲ್ಲಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಬೆಂಗಳೂರಿಗೆ ಮರಳಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ಗೆ ನೀಡಲಾದ ಮನವಿಯ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಈಗಾಗಲೇ ಅನುಮತಿ ಕೇಳಿದ್ದಾರೆ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಒಂದು ವಾರದಿಂದ ದೆಹಲಿಯಲ್ಲಿದ್ದು, ರಾಜ್ಯಪಾಲರುಗಳ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು. ಹೀಗಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ.
ಇಂದು ರಾಜ್ಯಪಾಲರು ರಾಜ್ಯಕ್ಕೆ ವಾಪಸು ಆಗಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿರುವ ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರು ಪರಿಶೀಲನೆ ಮಾಡಲಿದ್ದಾರೆ. ಸಿಎಂಗೆ ಕಳಿಸಿರುವ ನೋಟೀಸ್ ಅನ್ನು ವಾಪಸ್ ಪಡೆಯುವಂತೆ ರಾಜ್ಯಪಾಲರಿಗೆ ಕ್ಯಾಬಿನೆಟ್ ಮನವಿ ಮಾಡಿದೆ. ಇದು ಪ್ರಾಸಿಕ್ಯೂಷನ್ಗೆ ಅರ್ಹ ಪ್ರಕರಣವೇ ಅಲ್ಲವೇ ಎಂದು ತೀರ್ಮಾನ ತೆಗೆದುಕೊಳ್ಳುವ ಹಾಗೂ ಕಾನೂನು ಸಲಹೆ ಬೇಕಿದ್ದರೆ ಮತ್ತೊಮ್ಮೆ ವಕೀಲರ ಜತೆ ರಾಜ್ಯಪಾಲರು ಚರ್ಚೆ ನಡೆಸುವ ಸಂಭವ ಇದೆ.
ತನಿಖೆಗೆ ಅನುಮತಿ ಕೊಟ್ಟರೆ ಸಿಎಂ ಸಿದ್ದರಾಮಯ್ಯನವರಿಗೆ ಕಾನೂನು ಕಂಟಕ ಶುರುವಾಗಲಿದೆ. ಪ್ರಾಸಿಕ್ಯೂಶನ್ಗೆ ಅನುಮತಿ ಸಿಕ್ಕ ಬೆನ್ನಲ್ಲೇ ಅಬ್ರಾಹಂ ಖಾಸಗಿ ದೂರು ದಾಖಲಿಸಲಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ಇಲ್ಲವೇ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಬಹುದು. ಬಳಿಕ ಪ್ರಕರಣ ಸ್ವೀಕರಿಸುವ ಇಲ್ಲವೇ ತಿರಸ್ಕರಿಸುವ ಬಗ್ಗೆ ನ್ಯಾಯಾಲಯದಲ್ಲಿ ವಾದ ಹಾಗೂ ಪ್ರತಿವಾದ ನಡೆಯಲಿದೆ.
ಕೋರ್ಟ್ ಖಾಸಗಿ ದೂರನ್ನು ಸ್ವೀಕರಿಸಿದರೆ ಸಿಎಂಗೆ ಬಂಧನದ ಭೀತಿಯೂ ಶುರುವಾಗಬಹುದು. ತನಿಖೆಗೆ ಆದೇಶ ನೀಡಿದರೆ ರಾಜೀನಾಮೆಗೆ ಒತ್ತಡ ಇನ್ನಷ್ಟು ಹೆಚ್ಚಲಿದೆ. ಪ್ರತಿಪಕ್ಷಗಳ ಜೊತೆಗೆ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಸ್ವಪಕ್ಷೀಯರು ಕೂಡ ಒಳ ಏಟು ಶುರು ಮಾಡಬಹುದು. ಸ್ವಪಕ್ಷದಲ್ಲೂ ಸಿಎಂ ರಾಜೀನಾಮೆಗೆ ಬೇಡಿಕೆ ಕೇಳಿಬರಬಹುದು. ಹೀಗಾಗಿ ರಾಜ್ಯ ರಾಜಕೀಯ ಇನ್ನಷ್ಟು ತಲ್ಲಣ ಸೃಷ್ಟಿಸಲಿದೆ.