ಬೆಳಗಾವಿ,05:ಅಂಧಾನುಕರಣೆಯ ಆಚರಣೆಗಳನ್ನು ಪ್ರಶ್ನಿಸದೇ ಆಚರಿಸುವದನ್ನು ವಿರೋಧಿಸಿದ ಬಸವಾದಿ ಶರಣರು, ಯಾವುದನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳಬಾರದು ಎಂದು ಕಲಿಸಿದರು. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಸುಲಭ ಮಾರ್ಗವನ್ನು ಸಮಾಜಕ್ಕೆ ತೋರಿಸಿಕೊಟ್ಟು ವೈಚಾರಿಕತೆಯ ನಿಜವಾದ ಅರ್ಥವನ್ನು ತಿಳಿಸಿಕೊಟ್ಟವರು ಬಸವಾದಿ ಶಿವಶರಣರು ಎಂದು ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರಗೌಡ ಪಾಟೀಲ ಅಭಿಪ್ರಾಯಪಟ್ಟರು.
ಅವರು ಭಾನುವಾರ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಆಯೋಜಿಸಲಾಗಿದ್ದ ಮಾಸಿಕ ಅನುಭಾವ ಗೋಷ್ಠಿಯಲ್ಲಿ “ವಚನಗಳಲ್ಲಿ ವೈಚಾರಿಕತೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಸ್ವಧರ್ಮವನ್ನು ಆಚರಿಸಿ ಪರಧರ್ಮಗಳಿಗೆ ಗೌರವ ಕೊಡುತ್ತಾ ವೈಜ್ಞಾನಿಕ ಹಿನ್ನೆಲೆಯಲ್ಲಿ ಯೋಚಿಸುವುದೇ ವೈಚಾರಿಕತೆ. ವೈಚಾರಿಕತೆಯ ಮೊದಲ ಹಂತ ಪ್ರಶ್ನಿಸಿಸುವುದು,ಎರಡನೆಯ ಹಂತ ಪರೀಕ್ಷಿಸುವದು, ಮೂರನೆಯ ಹಂತ ತರೆದ ಮನಿಸ್ಸಿನಿಂದ ಅದನ್ನು ಒಪ್ಪಿಕೊಳ್ಳುವದು.
ವೈಚಾರಿಕತೆಯ ಮೂಲ ಮಂತ್ರ ಪ್ರಾರಂಭವಾಗಿದ್ದೇ ಬಸವಾದಿ ಶರಣರಿಂದ. ಆಗಿನ ಕಾಲದಲ್ಲಿದ್ದ ಮೂಢ ನಂಬಿಕೆ,ಕಂದಾಚಾರ,ಧಾರ್ಮಿಕ ಶೋಷಣೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ಅನುಭಾವವನ್ನು ವಚನಗಳ ಮೂಲಕ ವ್ಯಕ್ತಪಡಿಸುತ್ತಾ ಸಮಾಜವನ್ನು ಎಚ್ಚರಗೊಳಿಸಿ,ವೈಚಾರಿಕತೆಯ ಜಾಗೃತಿ ಬಸವಾದಿ ಶರಣರು ಮೂಡಿಸಿದರು.
ಶರಣರ ವಚನಗಳ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಹಸನಾಗುವದು. ಕಾರಣ ಎಲ್ಲರೂ ಮೂಢನಂಬಿಕೆ,ಕಂದಾಚಾರಗಳಿಂದ ದೂರವಿರಿ ಎಂದು ಅವರು ತಿಳಿಸಿದರು.
ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ದಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಶರಣರ ಆಶಯದಂತೆ ಮೂಢನಂಬಿಕೆ,ಕಂದಾಚಾರ ರಹಿತ ಸಮಾಜ ಕಟ್ಟಲು ಈಗಿನ ಮಕ್ಕಳಲ್ಲಿ ಸಂಸ್ಕಾರದ ಬೀಜಗಳನ್ನು ಬಿತ್ತಬೇಕಾದ ಅವಶ್ಯಕತೆ ಇದೆ. ಅದಕ್ಕಾಗಿಯೆ ನಾಗನೂರು ರುದ್ರಾಕ್ಷಿ ಮಠದಲ್ಲಿ ಸಂಸ್ಕಾರ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸಮಾಜ ಇದರ ಸದುಯೋಗ ಪಡೆದುಕೊಳ್ಳಬೆಕು ಎಂದರು.
ಅನುಭಾವ ಗೋಷ್ಠಿಯ ಅದ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳ ವಿವರ ತಿಳಿಸುತ್ತಾ ಬಸವಣ್ಣನವರ ಕುರಿತು ಇಲ್ಲ ಸಲ್ಲದ ವಿಚಾರಗಳನ್ನು ತಿರುಚಿ ವಚನ ಪುಸ್ತಕ ಪ್ರಟಿಸುವ ಹುನ್ನಾರ ಕೆಲವರಿಂದ ನಡೆದಿದೆ.
ಅದನ್ನು ಜಾಗತಿಕ ಲಿಂಗಾಯತ ಮಹಾಸಭಾ ಖಂಡಿಸುತ್ತದೆ. ಅಲ್ಲದೇ ಈ ಕುರಿತು ಉಗ್ರ ಹೋರಾಟಕ್ಕೂ ಸಿದ್ದವಿದೆ ಎಂದು ಎಚ್ಚರಿಸಿದರು.
ಪ್ರಾರಂಭದಲ್ಲಿ ಪ್ರಸಾದ ದಾಸೋಹಿಗಳಾದ ಸುಶೀಲಾ ಶಂಕರ ದಳವಾಯಿ ದಂಪತಿ ಷಟ್ ಸ್ಥಲ ಧ್ವಜಾರೋಹಣ ನೆರವೇರಿಸಿದರು. ವೇದಿಕೆಯ ಮೇಲೆ ಬೆಳಗಾವಿ ವಿಭಾಗದ ಸಹಕಾರ ಇಲಾಖೆಯ ಜಂಟಿ ಪ್ರಭಂದಕ ಸುರೇಶಗೌಡ ಪಾಟೀಲ ಉಪಸ್ಥಿತರಿದ್ದರು.
ಜಾಗತಿಕ ಲಿಂಗಾಯತ ಮಹಾಸಭೆಯ ನಗರ ಘಟಕದ ಪ್ರದಾನ ಕಾರ್ಯದರ್ಶಿ ಚಂದ್ರಪ್ಪ ಬೂದಿಹಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾರಿ ಗುರುಬಸವ ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ತೋರಣಗಟ್ಟಿ ನಿರೂಪಿಸಿದರು. ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತಾ ಮತ್ತಿಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅಶೋಕ ಮಳಗಲಿ,ಮುರುಗೆಪ್ಪ ಬಾಳಿ, ಎಸ್.ಜಿ.ಸಿದ್ನಾಳ,ಮೋಹನ ಗುಂಡ್ಲೂರ,ಅರವಿಂದ ಪರುಶೆಟ್ಟಿ ಮುರಿಗೆಪ್ಪ ಬಾಳಿ ಸೇರಿದಂತೆ ವಿವಿಧ ಬಡಾವಣೆಗಳ ಬಸವ ಅನುಯಾಯಿಗಳು ಪಾಲ್ಗೊಂಡಿದ್ದರು.