ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆಗೆ ಬಂಧಿತರಾಗಿ ನಂತರ ತುಮಕೂರು ಜೈಲಿನಲ್ಲಿ ಒಂದೇ ಸೆಲ್‌ನಲ್ಲಿರುವ ಆರೋಪಿಗಳ ನಡುವೆ ಪರಸ್ಪರ ಮಾತಿನ ಚಕಮಕಿ, ಬೈಗುಳ ವಿನಿಮಯ ಹಾಗೂ ಹೊಯ್‌ಕೈ ನಡೆದಿರುವುದು ವರದಿಯಾಗಿದೆ.
ಸದ್ಯ ಸುರಕ್ಷತೆಯ ಕಾರಣದ ಪರಪ್ಪನ ಅಗ್ರಹಾರದಿಂದ ತುಮಕೂರು ಜೈಲಿಗೆ ಸ್ಥಳಾಂತರಿಸಿರುವ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿಗಳಾದ ರವಿಶಂಕರ್, ನಿಖಿಲ್, ಕಾರ್ತಿಕ್, ಕೇಶವ ಎಲ್ಲರೂ ಒಂದೇ ಬ್ಯಾರಕ್‌ನಲ್ಲಿದ್ದಾರೆ. ಪ್ರಕರಣದ ಹೊಣೆ ನಿನ್ನದು ನಿನ್ನದು ಎಂದು ನಾಲ್ವರೂ ಬೈದಾಡಿಕೊಂಡಿದ್ದಾರೆ.
ಈ ಪ್ರಕರಣದ ಬಳಿಕ ನಮ್ಮೆಲ್ಲರ ಜೀವನ ಸೆಟ್ಲ್ ಆಗುತ್ತೆ ಡೋಂಟ್ ವರಿ ಎಂದು ಇನ್ನೊಬ್ಬ ಆರೋಪಿ ರಾಘವೇಂದ್ರ ಹಣದ ಆಮಿಷ ತೋರಿಸಿದ್ದನಂತೆ. ಕೊಲೆ ಬಳಿಕ ಮೃತದೇಹ ಬಿಸಾಡಿದ್ದು, ಸ್ಟೇಷನ್‌ಗೆ ಹೋಗಿ ಸರೆಂಡರ್ ಆಗಿದ್ದು ಎಲ್ಲವನ್ನೂ ಈ ಆರೋಪಿಗಳು ರಾಘವೇಂದ್ರ ಹೇಳಿದಂತೆ ಮಾಡಿದ್ದಾರೆ. ಆದರೆ ಪೊಲೀಸರ ತನಿಖೆಯ ಬಿಗಿ ಹೆಚ್ಚಾಗುತ್ತ ಹೋದಂತೆ ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ.