ಅಂಗನವಾಡಿಯ ಪರಿಕಲ್ಪನೆಯನ್ನೇ ನಮ್ಮ ಸರಕಾರ ಬದಲಾಯಿಸಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Ravi Talawar
ಅಂಗನವಾಡಿಯ ಪರಿಕಲ್ಪನೆಯನ್ನೇ ನಮ್ಮ ಸರಕಾರ ಬದಲಾಯಿಸಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now
ಬೆಳಗಾವಿ : ಕಳೆದ 49 ವರ್ಷಗಳ ಹಿಂದೆ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿದ ಹೆಗ್ಗಳಿಕೆ ಕರ್ನಾಟಕದ್ದು; ಈಗ  ಮತ್ತೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಅಂಗನವಾಡಿಗಳಲ್ಲೇ ‘ಸರ್ಕಾರಿ ಮಾಂಟೆಸ್ಸರಿ’ ಆರಂಭಿಸುವ ಮೂಲಕ ‘ಕರ್ನಾಟಕ’ ದೇಶದ ಇತಿಹಾಸದ ಸುವರ್ಣಾಕ್ಷರದಲ್ಲಿ ಬರೆಯುವಂತ ಹೊಸ ದಾಖಲೆ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರೀಕರ ಹಾಗೂ ವಿಶೇಷ ಚೇತನರ ಇಲಾಖೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ 1975ನೇ ಇಸವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಪ್ರಪ್ರಥಮ ಬಾರಿಗೆ ನಮ್ಮ ದೇಶದ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರು ಅಂಗನವಾಡಿಗಳಿಗೆ ಚಾಲನೆ ಕೊಟ್ಟರು ಎಂದು ಹೇಳಿದರು.
ಬಡವರ, ಹಳ್ಳಿಯ ರೈತರ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಯಲ್ಲಿ ಅವರಿಗೆ ಒಳ್ಳೆಯ ಶಿಕ್ಷಣ ಸಿಗಬೇಕು; ಒಳ್ಳೆಯ ಆರೈಕೆ ಸಿಗಬೇಕು ಎನ್ನುವ ಆಶಯದಿಂದ 49 ವರ್ಷಗಳ ಹಿಂದೆ, ದಿವಂಗತ, ಶ್ರೀಮತಿ ಇಂದಿರಾ ಗಾಂಧಿಯವರು ಅದೂ ಕರ್ನಾಟಕದಲ್ಲೇ, ಅದೂ, ನಮ್ಮ ಮೈಸೂರು ಜಿಲ್ಲೆ  ಟಿ. ನರಸೀಪುರದಲ್ಲಿ ಸ್ಥಾಪಿಸಿದರು. ಕರ್ನಾಟಕದಲ್ಲಿ ಅಂಗನವಾಡಿ ಸ್ಥಾಪನೆಗೊಂಡು ಮುಂದಿನ ವರ್ಷಕ್ಕೆ ಐವತ್ತು ವರ್ಷಗಳು ತುಂಬಲಿದ್ದು, ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದರು.
ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಅದೂ ನಮ್ಮ ಕರ್ನಾಟಕದಲ್ಲಿ  ನಮ್ಮ ಅಂಗನವಾಡಿಗಳು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವವ ಸುಸಂದರ್ಭದಲ್ಲಿ ಇಲಾಖೆಯ ಸಚಿವೆಯಾಗಿ ಇರುವುದು ಹೆಮ್ಮೆ ಎನಿಸುತ್ತಿದೆ. ಹಿಂದೆ ಒಂದು ಕಾಲವಿತ್ತು ಅಂಗನವಾಡಿಗಳಿಗೆ ಹೋಗುವ ಮಕ್ಕಳೆಂದರೆ, ನರ್ಸರಿಗಳಿಗೆ ಫೀ ಕಟ್ಟಲಾಗದವರು, ಬಡವರ ಮಕ್ಕಳು ಮಾತ್ರ ಹೋಗುವ ಪರಿಕಲ್ಪನೆ ಇತ್ತು. ಆದರೆ, ಇಂದು ಆ ಪರಿಕಲ್ಪನೆ ಬದಲಾಗಿದೆ. ನಮ್ಮ ಸರ್ಕಾರ ನಮ್ಮ ಅಂಗನವಾಡಿ ಚಿತ್ರಣವನ್ನೇ ಬದಲಾಯಿಸಿದೆ. ನಮ್ಮ ಅಂಗನವಾಡಿಗಳಲ್ಲೇ ಸರ್ಕಾರಿ ಮಾಂಟೆಸ್ಸರಿ -ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಆರಂಭಿಸಿದೆ. ಈಗಾಗಲೇ, ಬೆಂಗಳೂರಿನಲ್ಲಿ 250 ಎಲ್ ಕೆಜಿ, ಯುಕೆಜಿ ನರ್ಸರಿಗಳು ಚಾಲನೆಗೊಂಡಿವೆ ಎಂದು ಹೇಳಿದರು.
ದೇಶ ಬೆಳೆಯುತ್ತಿದೆ; ರಾಜ್ಯವೂ ಅಭಿವೃದ್ಧಿಯನ್ನು ಮುನ್ನಡೆಯುತ್ತಿವೆ; ಹಾಗೆಯೇ ನಮ್ಮ ಅಂಗನವಾಡಿಗಳು ಕೂಡ ಉನ್ನಿತೀಕರಣ ಆಗಬೇಕೆಂಬ ಆಶಯದಿಂದ ನಮ್ಮ ಇಲಾಖೆ, ಅಂಗನವಾಡಿಗಳನ್ನುಆಧುನೀಕರಣಗೊಳಿಸುತ್ತಿದೆ. ಇದು ಪೈಪೋಟಿ ಯುಗ, ಆಧುನಿಕ ತಂತ್ರಜ್ಜಾನ ಯುಗ; ಹಾಗಾಗಿ, ಇಂತಹ ಯುಗದಲ್ಲಿ, ಬಿಡುವಿಲ್ಲದೆ ದುಡಿಯುವ ಜನರ ಮಕ್ಕಳು, ರೈತರ ಮಕ್ಕಳು ಕೂಡ ನರ್ಸರಿ ಕಲಿಯಬೇಕೆಂದು ಆಶಯದಿಂದ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಲಾಗಿದೆ. ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮಕ್ಕಳಿಗೆ ಕಲಿಸುವ ವ್ಯವಸ್ಥೆ ಮಾಡಲಾಗಿದೆ ಎಂದು  ಸಚಿವರು ಹೇಳಿದರು.
ಅಂಗನವಾಡಿಗಳಲ್ಲಿ ಸರ್ಕಾರದ, ಇಲಾಖೆಯ ಅಶಯದಂತೆ ಕಾರ್ಯಕರ್ತೆಯರು ಕೆಲಸ ಮಾಡಬೇಕು; ತಮ್ಮ ಮಕ್ಕಳಂತೆ ಫೋಷಿಸಿ, ಅವರನ್ನು ಒಳ್ಳೆಯ ಶಿಕ್ಷಣವಂತರಾಗಿ ಬೆಳೆಯಲು ಸಹಕಾರ ನೀಡಬೇಕು. ಈಗ ಅಂಗನವಾಡಿ ಗಳಲ್ಲಿ ಕೆಲಸ ಮಾಡುವವರಿಗೆ ಪಿಯುಸಿ ಮಾನದಂಡ ಮಾಡಲಾಗಿದೆ. ಆದರೆ, ಈಗಾಗಲೇ ಅಂಗನವಾಡಿಗಳಲ್ಲಿ ಎಂ ಎ, ಬಿಎ, ಬಿಎಡ್, ಬಿಇ ಕಲಿತವರು ಕೂಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಹೇಳಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಬೆಳಗಾವಿಯ ಗೃಹ ಕಚೇರಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೂತನವಾಗಿ ನೇಮಕಗೊಂಡಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ  ನೇಮಕಾತಿಯ ಆದೇಶ ಪತ್ರಗಳನ್ನು ವಿತರಿಸಿದರು. ಗ್ರಾಮೀಣ ಕ್ಷೇತ್ರದಲ್ಲಿ ಒಟ್ಟು 43 ಜನ ಅಂಗನವಾಡಿ ಸಹಾಯಕಿಯರು ಹಾಗೂ 6 ಜನ ಕಾರ್ಯಕರ್ತೆಯರು ನೇಮಕಗೊಂಡಿದ್ದು, ಇವತ್ತು ಆದೇಶಗಳನ್ನು ವಿತರಿಸಿದ ಸಚಿವರು, ಶುಭ ಕೋರಿದರು. ಇದೇ ಸಮಯದಲ್ಲಿ ಕಾರ್ಯಕರ್ತೆಯರಿಗೆ ಹೊಸ‌ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಸಹ ವಿತರಿಸಲಾಯಿತು. ಈ ಸಮಯದಲ್ಲಿ ಇಲಾಖೆಯ ಉಪ ನಿರ್ದೇಶಕ ನಾಗರಾಜ, ಸಿಡಿಪಿಓ ಸುಮಿತ್ರಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.
ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದ  ನಮ್ಮ ಅಂಗನವಾಡಿ ಹೆಸರನ್ನೂ ಕೂಡ ಬದಲಾಯಿಸಿ, ಈಗ ಇವುಗಳಿಗೆ  ‘ಸರ್ಕಾರೀ ಮಾಂಟೆಸ್ಸರಿ’ ಎಂದು ಹೆಸರು ಇಡಲಾಗಿದೆ. ಉತ್ತರ ಕರ್ನಾಟಕ ಜನರಿಗೆ ಗೊತ್ತಾಗಲಿಯೆಂದು ಎಲ್ ಕೆಜಿ, ಯುಕೆಜಿ ಎಂದು ಕರೆಯಲಾಗುತ್ತದೆ. ದಕ್ಷಿಣ ಕರ್ನಾಟಕದ ಮೈಸೂರು-ಕರ್ನಾಟಕ ಭಾಗದ ಕಡೆಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳೆಂದು ಕರೆಯಲಾಗುತ್ತದೆ.
ಇಡೀ ರಾಜ್ಯದಲ್ಲಿ 18 ಸಾವಿರ ; ಬೆಳಗಾವಿ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು; ಅದರಲ್ಲೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ  300ಕ್ಕೂ ಅಧಿಕ ಎಲ್ ಕೆಜಿ, ಯುಕೆಜಿ ಯನ್ನು ಆರಂಭಿಸಲಾಗುವುದು. ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮದಲ್ಲಿ  ಮಾಂಟೆಸ್ಸರಿಗಳನ್ನು ತೆರೆಯಲಾಗುತ್ತಿದ್ದು, ಇಲಾಖೆ ವತಿಯಿಂದ ಮಕ್ಕಳಿಗೆ ಯುನಿಫಾರಂ, ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಕಲಿಕಾ ಪುಸ್ತಕಗಳನ್ನು ವಿತರಿಸಲಾಗುವುದು. ಮುಂದಿನ ತರಗತಿಗಳಿಗೆ ಹೋಗಲು ಟಿಸಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೊಸ ಹುರುಪವನ್ನು ಇಟ್ಟುಕೊಂಡು ಹೊಸದಾಗಿ ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ; ಹಾಗಾಗಿ, ವೈಯಕ್ತಿಕವಾಗಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ, ಇಲಾಖೆ ಸಚಿವೆಯಾಗಿ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುವೆ.
ಇದೊಂದು ಅವಿಸ್ಮರಣೀಯ ಸಂದರ್ಭ. ಏಕೆಂದರೆ, ವಿಶೇಷವಾಗಿ ಇವರೆಲ್ಲರ ಹಾರೈಕೆಯಿಂದ ಬೆಳಗಾವಿ ಗಾಮೀಣ ಮತಕ್ಷೇತ್ರದ ನಮ್ಮ ಅಕ್ಕ ತಂಗಿಯರ ಸಹಕಾರದಿಂದ ನಾನೀಗ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ ಕೆಲಸ ಮಾಡುತ್ತಿದ್ದೇನೆ. ಬಹಳ ಸಂತೋಷದ ವಿಷಯ ಏನೆಂದರೆ, ನನ್ನ ಗ್ರಾಮೀಣ ಕ್ಷೇತ್ರದಿಂದ ನಾನು ಶಿಫಾರಸ್ಸು ಮಾಡಿದಂತಹ  ಜನರಿಗೆಯೇ ನನ್ನ ಇಲಾಖೆಯಲ್ಲಿ ಕೆಲಸ ಕೊಡುತ್ತಿರುವುದು ಖುಷಿ ತಂದಿದೆ;
ವಿಶೇಷ ಅನಿಸುತ್ತಿದೆ. ಅಂದು ನಾನು ಶಿಫಾರಸ್ಸು ಪತ್ರಗಳಷ್ಟೇ ನೀಡಿದ್ದೇ. ಆದರೆ, ಇಂದು ಆದೇಶ ಪತ್ರವನ್ನೂ ನಾನೇ ಕೊಡುತ್ತಿರುವುದು; ಅಂಗನವಾಡಿ ಕಾರ್ಯಕರ್ತೆಯರಿಗೆ ಇರಬಹುದು ಅಥವಾ ನನಗೇ ಇರಬಹುದು ಎಲ್ಲರೂ ತಮ್ಮ ಜೀವನದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವ ಸಂದರ್ಭವಾಗಿದೆ ಎಂದರು.
ಅಂಗನವಾಡಿಗಳೆಂದರೆ, ಮಕ್ಕಳ ವಿದ್ಯಾಭ್ಯಾಸದ ಫ್ಯಾಕ್ಟರಿಯಾಗಿ ತಯಾರು ಮಾಡುವ, ಮಕ್ಕಳ ಮಾರ್ಡೆನೇಸ್ ಮಾಡುವುದಕ್ಕೆ ಎಲ್ಲ ರೀತಿಯಿಂದಲೂ ಸನ್ನದ್ಧರಾಗಿದ್ದೇವೆ. ಇದಕ್ಕೆ ಮುಖ್ಕಮಂತ್ರಿ ಸಿದ್ದರಾಮಯ್ಯನವರು ಆಶೀರ್ವಾದ ನೀಡಿದ್ದು, ಅಂಗನವಾಡಿಗಳಿಗೆ ಹೊಸ ರೂಪ, ಹೊಸ ಕಳೆ  ತರಲು  ಇಲಾಖೆ ಸನ್ನದ್ಧವಾಗಿದೆ.-ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು*
WhatsApp Group Join Now
Telegram Group Join Now
Share This Article