ಭಾರಿ ಮಳೆ: ಹಂಪಿಯ ಹಲವು ಸ್ಮಾರಕಗಳು ಮುಳುಗಡೆ

Ravi Talawar
ಭಾರಿ ಮಳೆ: ಹಂಪಿಯ ಹಲವು ಸ್ಮಾರಕಗಳು ಮುಳುಗಡೆ
WhatsApp Group Join Now
Telegram Group Join Now

ಹೊಸಪೇಟೆ, ಜುಲೈ 31: ಭಾರಿ ಮಳೆಯಾಗುತ್ತಿದ್ದು, ಒಳ ಹರಿವು ಹೆಚ್ಚಿರುವ ಕಾರಣ ತುಂಗಭದ್ರಾ ಅಣೆಕಟ್ಟೆಯಿಂದ 1.6 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಬಿಡಲಾಗುತ್ತಿದೆ. ಪರಿಣಾಮವಾಗಿ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣ ಹಂಪಿಯ ಹಲವು ಸ್ಮಾರಕಗಳು ಮುಳುಗಡೆಯಾಗಿವೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವಾಗ ನದಿಯ ಸಮೀಪ ಎಲ್ಲೆಂದರಲ್ಲಿ ಪ್ರಯಾಣಿಸದಂತೆ ಪ್ರವಾಸಿಗರಿಗೆ ವಿಜಯನಗರ ಆಡಳಿತ ಎಚ್ಚರಿಕೆ ನೀಡಿದೆ.

ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಕಳೆದ 20 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಸದ್ಯ ಹಂಪಿಯ ಪುರಂದರ ಮಂಟಪ, ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ಹನುಮ ದೇವಸ್ಥಾನ ಸೇರಿದಂತೆ 12 ಸ್ಮಾರಕಗಳು ಮುಳುಗಡೆಯಾಗಿವೆ.

ಭಾರಿ ಮಳೆಯಾದಾಗ ಅಣೆಕಟ್ಟಿನಿಂದ ನೀರು ಹೊರಬಿಡಲಾಗುತ್ತದೆ. ಸದ್ಯ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪ್ರವಾಹಕ್ಕೆ ಒಳಗಾದ ಸ್ಥಳಗಳನ್ನು ಪರಿಶೀಲಿಸಿದ್ದೇನೆ ಮತ್ತು ಜನರು ಪ್ರವಾಹಪೀಡಿತ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ವಿಜಯನಗರ ಡಿಸಿ ಎಂಎಸ್ ದಿವಾಕರ್ ತಿಳಿಸಿದ್ದಾರೆ.

ಕಳೆದ 4-5 ದಿನಗಳಿಂದ ಜಲಾವೃತಗೊಂಡ ಸ್ಮಾರಕಗಳ ದರ್ಶನಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಿಲ್ಲ. ಪ್ರವಾಸಿಗರು ಸೂಚನೆಗಳನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article