ಮೂಡಲಗಿ : ಈಗಾಗಲೇ ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರು ಉಳಿದುಕೊಂಡಿರುವ ಕಾಳಜಿ ಕೇಂದ್ರಗಳಿಗೆ ನೆರವು ದೊರೆತಿದ್ದು, ಅಗತ್ಯವಿದ್ದರೆ ನಾನು ಕೂಡ ಪ್ರವಾಹ ಪೀಡಿತ ಕುಟುಂಬಗಳಿಗೆ ನನ್ನ ಕೈಲಾದಷ್ಟು ಸೇವೆ ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಸಿದ್ದ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.
ಸೋಮವಾರದಂದು ಪಟ್ಟಣದ ಪತ್ರಿಕಾ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ತಾಲೂಕಿನ ಘಟಪ್ರಭ ನದಿಯ ತೀರದ ಪಟಗುಂದಿ, ಮಸಗುಪ್ಪಿ, ಹುಣಶ್ಯಾಳ ಪಿ.ಜಿ ಯ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಮಾತನಾಡಿದ ಅವರು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಹಿಡಕಲ್ ಜಲಾಶಯದಿಂದ ಹರಿಬಿಟ್ಟ ನೀರಿನಿಂದ ಅರಭಾವಿ ಕ್ಷೇತ್ರದ ಘಟಪ್ರಭ ನದಿ ತೀರದ ಪಟಗುಂದಿ, ಮಸಗುಪ್ಪಿ, ವಡೇರಹಟ್ಟಿ, ಹುಣಶ್ಯಾಳ ಪಿಜಿ, ಅಡಿಬಟ್ಟಿ. ತಳಕಟ್ನಾಳ, ಉದಗಟ್ಟಿ, ಸುಣಧೋಳಿ, ಹುಣಶ್ಯಾಳ ಪಿವೈ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಸೇರಿದಂತೆ ಅನೇಕ ಗ್ರಾಮಗಳು ಜಲಾವೃತಗೊಂಡಿದ್ದು, ಆಯಾ ಗ್ರಾಮಗಳ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಸಂತ್ರಸ್ತರಿಗೆ ಧೈರ್ಯ ತುಂಬುತ್ತಿದ್ದೇನೆ. ಜನರಿಗೆ ಹಾಗೂ ಜಾನುವಾರುಗಳಿಗೆ ಮಾಡಿರುವ ವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಗಳಿಂದ ಮಾಹಿತಿ ಪಡೆದು, ಅಗತ್ಯವಿದ್ದರೆ ನಾನು ಕೂಡ ಸೇವೆ ಸಲ್ಲಿಸಲು ಸಿದ್ದ ಎಂದು ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರು ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ, ಬೆಳಗಾವಿಯ ಸಂಸದರು ಹಾಗೂ ಕ್ಷೇತ್ರದ ಶಾಸಕರು ಸಹ ಕ್ಷೇತ್ರದ ಘಟಪ್ರಭ ನದಿ ತೀರದ ಸಂತ್ರಸ್ತರ ನೆರವಿಗೆ ಧಾವಿಸಬೇಕೆಂದು ಕುಟುಕಿದರು. ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸವಸುದ್ದಿಯವರು ಅಲ್ಲಿದ್ದ ಸಂತಸ್ತ ಪುಟಾಣಿ ಮಕ್ಕಳ ಯೋಗಕ್ಷೇಮ ವಿಚಾರಿಸಿ ಬಿಸ್ಕಿಟ್ ವಿತರಿಸಿದರು.
ಈ ಸಮಯದಲ್ಲಿ ಮಹಾಲಿಂಗಯ್ಯಾ ನಂದಗಾವಮಠ, ಸಿದ್ದು ಮರಡಿ, ಮಲ್ಲಪ್ಪ ಹಾದಿಮನಿ ಉಪಸ್ಥಿತರಿದ್ದರು.