ಬೆಂಗಳೂರು, ಜುಲೈ 26: ಇತ್ತೀಚೆಗಷ್ಟೇ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ದ ಶೆಫ್ ಟಾಕ್ ಸಂಸ್ಥೆಯನ್ನು ಕೈಬಿಟ್ಟು ಅದರ ಬದಲಿಗೆ ಕ್ಯಾಂಟೀನ್ ನಿರ್ವಹಣೆಗೆ ಹೊಸ ಟೆಂಡರ್ ಕರೆಯಲು ಸರ್ಕಾರ ಮುಂದಾಗಿದೆ. ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಇಂದಿರಾ ಕ್ಯಾಂಟೀನ್ಗಳನ್ನು ಸಂಸ್ಥೆ ಬಂದ್ ಮಾಡಿತ್ತು. ಈ ವಿಚಾರ ಕಾಂಗ್ರೆಸ್ ಸರ್ಕಾರ ಮುಜುಗರಕ್ಕೀಡಾಗಲು ಕಾರಣವಾಗಿತ್ತು.
ಬೆಂಗಳೂರಿನ ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಗೆ ಇದೀಗ ಬಿಬಿಎಂಪಿ ಹೊಸ ಸಂಸ್ಥೆಗಳಿಗೆ ಟೆಂಡರ್ ಆಹ್ವಾನ ನೀಡಿದೆ. ಆಗಸ್ಟ್ ನಿಂದ ಹೊಸ ಟೆಂಡರ್ದಾರರಿಗೆ ಜವಬ್ದಾರಿ ವಹಿಸಲು ಬಿಬಿಎಂಪಿ ಸಜ್ಜಾಗಿದೆ. ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ ಹೊಸ ಗುತ್ತಿಗೆ ನೀಡಿದ್ದು, ಸದ್ಯ ಬಿಬಿಎಂಪಿಯ 6 ವಲಯಗಳ ಕ್ಯಾಂಟೀನ್ಗೆ ಆಹಾರ ಪೂರೈಕೆಗೆ ಟೆಂಡರ್ ಅಂತಿಮಗೊಳಿಸಿದೆ. ಒಟ್ಟು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್ನಲ್ಲಿ ಟೆಂಡರ್ ನೀಡಲಾಗಿದೆ. ಒಟ್ಟು 192 ಇಂದಿರಾ ಕ್ಯಾಂಟೀನ್ಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಪೂರೈಕೆಗೆ ಟೆಂಡರ್ ಅನ್ವಯವಾಗಲಿದೆ. ಈ ಪೈಕಿ ದಾಸರಹಳ್ಳಿ ಮತ್ತು ಪಶ್ಚಿಮ ವಲಯದ ಟೆಂಡರ್ಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ.
ಸತೀಶ್ ಕುಮಾರ್ ಮಾಲೀಕತ್ವದ ರಿವಾರ್ಡ್ಸ್ ಎಂಬ ಸಂಸ್ಥೆಗೆ 6 ವಲಯದ 142 ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆಯ ಗುತ್ತಿಗೆಯನ್ನು ಎರಡು ವರ್ಷದ ಅವಧಿಗೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ನಿರ್ಮಿಸುವ 50 ಕ್ಯಾಂಟೀನ್ಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ 2 ಇಂದಿರಾ ಕ್ಯಾಂಟೀನ್ಗೂ ಈ ಸಂಸ್ಥೆ ಆಹಾರ ಪೂರೈಕೆ ಮಾಡಬೇಕಿದೆ.