ಚಿಕ್ಕಮಗಳೂರು: ಮಲೆನಾಡಿನಲ್ಲಿ ಪುಷ್ಯ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಹಲವು ಗ್ರಾಮಗಳಲ್ಲಿ ವಿದ್ಯುಚ್ಛಕ್ತಿ ಪೂರೈಕೆ ಸ್ಥಗಿತಗೊಂಡಿದೆ. ಜನರು ಹಣ ಕೊಟ್ಟು ಜನರೇಟರ್ ಮೂಲಕ ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳುವಂತಾಗಿದೆ. ಫುಲ್ ಮೊಬೈಲ್ ಚಾರ್ಜ್ಗೆ 60 ರೂಪಾಯಿ ಮತ್ತು ಅರ್ಧ ಚಾರ್ಜ್ ಮಾಡಲು 40 ರೂಪಾಯಿ ನಿಗದಿಪಡಿಸಲಾಗಿದೆ. ಕೆಲವೆಡೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಪ್ರಾರಂಭವಾಗಿದ್ದು, ಹೊಸ ವ್ಯವಹಾರ ಶುರುವಾಗಿದೆ. ಇದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ತವರು ಜಿಲ್ಲೆಯ ಪರಿಸ್ಥಿತಿ ಇದೆ ಎಂಬುದು ಗಮನಾರ್ಹ.
ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದಲ್ಲಿ ಮೊಬೈಲ್ ಚಾರ್ಜ್ಗಾಗಿ ಕಾಲೇಜು ಯುವಕರು ಮುಗಿ ಬೀಳುತ್ತಿದ್ದಾರೆ. ಶಾಮಿಯಾನ ಅಂಗಡಿಯೊಂದರಲ್ಲಿ ಜನರೇಟರ್ ಆನ್ ಮಾಡಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಆರಂಭಿಸಲಾಗಿದೆ. ಪ್ರತಿನಿತ್ಯ ಇಲ್ಲಿ ನೂರಾರು ಜನ ಬಂದು ತಮ್ಮ ಮೊಬೈಲ್ ಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ.
ಈ ಭಾಗದಲ್ಲಿ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿದೆ. ಇದನ್ನು ಸರಿಪಡಿಸಲು ಇಲಾಖೆ ಸಿಬ್ಬಂದಿ ಮುಂದಾಗುತ್ತಿಲ್ಲ ಎಂಬುದು ಜನರ ದೂರು.