ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ರಾಜ್ಯಸಭೆಯಲ್ಲಿ ಅಂಕೋಲಾ ಗುಡ್ಡ ಕುಸಿತದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ದುರಂತ ಸಂಭವಿಸಿ ಆರು ದಿನಗಳು ಕಳೆದರೂ ರಾಜ್ಯ ಸರ್ಕಾರದಿಂದ ಯಾರೊಬ್ಬರೂ ಭೇಟಿ ನೀಡಿರಲಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿದ ಬಳಿಕವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಇದು ಕರ್ನಾಟಕ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ನಿದರ್ಶನ ಎಂದರು. ಕರ್ನಾಟಕ ಸರ್ಕಾರ ರಾಜ್ಯದ ಪರಿಸ್ಥಿತಿ ಬಗ್ಗೆ ನಿರಾಸಕ್ತಿ ತೋರುತ್ತಿದೆ. ಹೆಚ್ಡಿ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆ ಹೋಗುವವರೆಗೂ ರಾಜ್ಯಸ ರ್ಕಾರ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ್ದು ರಾಜ್ಯಸಭೆಯಲ್ಲಿ ಗದ್ದಲ ಸೃಷ್ಟಿಸಿತು.
ಗೌಡರ ಹೇಳಿಕೆಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಘಟನೆ ಸಂಭವಿಸಿ 9 ಜನರು ಪ್ರಾಣ ಕಳೆದುಕೊಂಡಿದ್ದರೂ ಆರು ದಿನಗಳ ಕಾಲ ಯಾವುದೇ ರಾಜ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಇಡೀ ಬೆಟ್ಟವೇ ಕೆಳಗೆ ಜಾರಿತ್ತು. ನಾನು ರಾಜಕೀಯದ ಬಗ್ಗೆ ಮಾತನಾಡಲು ಬಯಸುವುದಿಲ್ಲ ಆದರೆ ಕೇಂದ್ರ ಉಕ್ಕು ಸಚಿವರು ಭೇಟಿ ನೀಡಿದ ಬಳಿಕವಷ್ಟೇ ಅಗ್ನಿಶಾಮಕ ಹಾಗೂ ಮಿಲಿಟರಿ ತಂಡವನ್ನು ಕಳುಹಿಸಲಾಗಿದೆ ಎಂದರು.