ಮುಡಾ ಚರ್ಚೆಯ ಅವಕಾಶಕ್ಕೆ ಮತ್ತೊಮ್ಮೆ ನಿರಾಕರಣೆ: ಸದನದಲ್ಲಿ ಧರಣಿ ಮುಂದುವರೆಸಿದ ಬಿಜೆಪಿ ಜೆಡಿಎಸ್

Ravi Talawar
ಮುಡಾ ಚರ್ಚೆಯ ಅವಕಾಶಕ್ಕೆ ಮತ್ತೊಮ್ಮೆ ನಿರಾಕರಣೆ:  ಸದನದಲ್ಲಿ ಧರಣಿ ಮುಂದುವರೆಸಿದ ಬಿಜೆಪಿ ಜೆಡಿಎಸ್
WhatsApp Group Join Now
Telegram Group Join Now

ಬೆಂಗಳೂರು: ಮೈಸೂರಿನ ಮುಡಾ ಹಗರಣ ಆರೋಪ ಕುರಿತ ಚರ್ಚೆಗೆ ಅವಕಾಶ ನಿರಾಕರಿಸಿದ್ದ ರೂಲಿಂಗ್​​ಅನ್ನು ಮರುಪರಿಶೀಲಿಸಲು ಬಿಜೆಪಿ ಜೆಡಿಎಸ್ ನೀಡಿದ್ದ ಕೋರಿಕೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿ ಮತ್ತೊಮ್ಮೆ ರೂಲಿಂಗ್ ನೀಡಿದರು. ಇದರಿಂದಾಗಿ ಬಿಜೆಪಿ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿದರು.

ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಯಲ್ಲಿ ಬಿಜೆಪಿ ಜೆಡಿಎಸ್ ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸಿ ಟಿ ರವಿ, ಸಿಎಂ ಹುಲಿಯಾ ಆದರೆ ಚರ್ಚೆಗೆ ಅವಕಾಶ ನೀಡುತ್ತಾರೆ, ಇಲ್ಲದಿದ್ದರೆ ಇಲಿಯಾ ಆಗಲಿದ್ದಾರೆ. ಆದರೆ ಸಿಎಂ ಓಡಿ ಹೋಗುವವರಲ್ಲ, ಚರ್ಚೆಗೆ ಅವಕಾಶ ನೀಡಿ ಎಂದು ನಿಮಗೂ ಅವರು ಸಲಹೆ ನೀಡಲಿದ್ದಾರೆ ಎಂದರು.

ಇದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ನಿಮ್ ಮಾತು ಕೇಳಿ ಮರದಲ್ಲಿರುವ ಮಂಗನೂ ಕೈ ಬಿಡ್ತಾವೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಶ್ಯೂ ಅಲ್ಲದೇ ಇರುವುದನ್ನು ಇಶ್ಯೂ ಮಾಡಿದ್ದೀರಿ, ವೈಯಕ್ತಿಕವಾಗಿ ತೆಗೆದುಕೊಂಡಿದ್ದೀರಿ, ಕಾನೂನು ರೀತಿ ಎಲ್ಲ ಸರಿ ಇದ್ದರೂ ವಿಷಯ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ನಿವೇಶನ ಕೊಟ್ಟಿದ್ದಾರೆ, ನಾವು ಇಂತಾ ಕಡೆ ಕೊಡಿ ಎಂದು ಕೇಳಿದ್ದೆವಾ? 2021 ರಲ್ಲಿ ಯಾರು ಅಧಿಕಾರದಲ್ಲಿದ್ದರು? ಬಿಜೆಪಿಯವರು ಅಧಿಕಾರದಲ್ಲಿದ್ದು, ನಿಮ್ಮ ಕಾಲದಲ್ಲಿ ಮಾಡಿದ ತಪ್ಪು ಅದು. ‌ಮುಡಾದವರು ಮಾಡಿಕೊಟ್ಟಿದ್ದಾರೆ, ಈಗಾಗಲೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇವೆ. ಹಾಗಾಗಿ ಸಭಾಪತಿ ಚರ್ಚೆಗೆ ಅವಕಾಶ ನಿರಾಕರಿಸಿದ್ದು ಸರಿಯಾಗಿದೆ. ಚರ್ಚೆಗೆ ಅವಕಾಶವಿಲ್ಲ, ಸರಿಯಾದ ತೀರ್ಮಾನವಾಗಿದೆ ಎಂದು ಸಮರ್ಥಿಸಿಕೊಂಡರು.

WhatsApp Group Join Now
Telegram Group Join Now
Share This Article