ಮುಡಾ ಗದ್ದಲದ ನಡುವೆಯೇ ಮೂರು ವಿಧೇಯಕಗಳ ಅಂಗೀಕಾರ!

Ravi Talawar
ಮುಡಾ ಗದ್ದಲದ ನಡುವೆಯೇ ಮೂರು ವಿಧೇಯಕಗಳ ಅಂಗೀಕಾರ!
WhatsApp Group Join Now
Telegram Group Join Now

ಬೆಂಗಳೂರು: ಮುಡಾ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಒಟ್ಟು 9 ವಿಧೇಯಕಗಳನ್ನು ಮಂಡಿಸಲಾಗಿದ್ದು, ಈ ಪೈಕಿ 8,573 ಕೋಟಿ ರೂ.ಗಳ ಪೂರಕ ಅಂದಾಜುಗಳ ಧನ ವಿನಿಯೋಗ ವಿಧೇಯಕ ಸೇರಿ ಮೂರು ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಗಿದೆ.

ಒಟ್ಟು 9 ವಿಧೇಯಕ ಮಂಡಿಸಿದ್ದು, ಈ ಪೈಕಿ 3 ಪರ್ಯಾಲೋಚನೆಗೆ ಪರಿಗಣಿಸಲಾಯಿತು. ಮುಡಾ ಗದ್ದಲದ ನಡುವೆ ನೀರಾವರಿ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಹಾಗೂ ಕಾಲುವೆಗಳ ಕೊನೇ ಭಾಗದ ರೈತರಿಗೂ ನೀರು ತಲುಪಿಸಲು ಅನುವಾಗುವಂತೆ ರೂಪಿಸಿರುವ ಕರ್ನಾಟಕ ನೀರಾವರಿ ತಿದ್ದುಪಡಿ ವಿಧೇಯಕ-2024 ಹಾಗೂ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ -20245ಕ್ಕೂ ಅನುಮೋದನೆ ನೀಡಲಾಯಿತು.

ಪೂರಕ ಅಂದಾಜಿನಲ್ಲಿ, ರಾಜ್ಯದ ವಿವಿಧ ಮಠಗಳು ಹಾಗೂ ದೇವಾಲಯಗಳಿಗೆ ನೀಡಲು 85 ಕೋಟಿ ರೂ.ಗಳಷ್ಟು ಮುಖ್ಯಮಂತ್ರಿಗಳ ವಿಶೇಷ ಅನುದಾನ ಒದಗಿಸುವುದು ಸೇರಿ ಕಂದಾಯ ಇಲಾಖೆಗೆ 6,993 ಕೋಟಿ ರೂ.ಗಳ ಬೇಡಿಕೆಗೆ ಸದನದ ಒಪ್ಪಿಗೆ ಪಡೆಯಲಾಯಿತು.

ನಗರಾಭಿವೃದ್ಧಿ ಇಲಾಖೆಯ 200 ಕೋಟಿ ರೂ., ಲೋಕೋಪಯೋಗಿ ಇಲಾಖೆಯ 250 ಕೋಟಿ ರೂ., ಕಾನೂನು ಇಲಾಖೆಯ 161 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ 450 ಕೋಟಿ ರೂ. ಸೇರಿ ಒಟ್ಟು 28 ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳ ಮೇಲಿನ ಪೂರಕ ಅಂದಾಜುಗಳಿಗೂ ಅಂಗೀಕಾರ ಸಿಕ್ಕಿದೆ.

ಇದಲ್ಲದೆ, ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿ, ವಿಶ್ವವಿದ್ಯಾಲಯ ಮುಂತಾದವುಗಳಲ್ಲಿ ಗುತ್ತಿಗೆ ಆಧಾರದ ಮೇಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂದಾತವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕ- 2024, ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ತಿದ್ದುಪಡಿ ವಿಧೇಯಕ-2024, ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಧೇಯಕಗಳನ್ನೂ ಮಂಡಿಸಲಾಯಿತು.

ಜೊತೆಗೆ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗಳಿಗೆ ರಕ್ಷಣೆ ಒದಗಿಸುವ ಹಾಗೂ ಹಲ್ಲೆ, ನಿಂದನೆ ಮಾಡುವವರಿಗೆ ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶ ನೀಡುವ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕ- 2024 ವಿಧೇಯಕವನ್ನು ಮಂಡನೆ ಮಾಡಲಾಯಿತು.

 

WhatsApp Group Join Now
Telegram Group Join Now
Share This Article