33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ರಣಯದೂರು ಪ್ಯಾರಿಸ್ ಸಜ್ಜಾಗಿ ನಿಂತಿದೆ. ಇಂದಿನಿಂದ ಶುರುವಾಗಲಿರುವ ಒಲಿಂಪಿಯಾಡ್ನಲ್ಲಿ ಈ ಬಾರಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಈ ಕ್ರೀಡಾಕೂಟದಲ್ಲಿ ಭಾರತದ 117 ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯುತ್ತಿದ್ದು, ಇವರಲ್ಲಿ 47 ಮಹಿಳಾ ಸ್ಪರ್ಧಿಗಳಿರುವುದು ವಿಶೇಷ. ಆದರೀಗ ಈ ಕ್ರೀಡಾಕೂಟಕ್ಕೆ ಕೊರೋನಾ ಭೀತಿ ಎದುರಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಮಹಾ ಕ್ರೀಡಾಕೂಟಕ್ಕೆ ಕೊರೋನಾ ಭೀತಿ ಕೂಡ ಎದುರಾಗಿದೆ. ಏಕೆಂದರೆ ಆಸ್ಟ್ರೇಲಿಯಾ ತಂಡದ ಇಬ್ಬರು ಪೋಲೋ ಆಟಗಾರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ.
2020 ರಲ್ಲಿ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಅನ್ನು ಕೊರೋನಾ ಕಾರಣದಿಂದಾಗಿ 2021 ರಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ ಇಡೀ ಕ್ರೀಡಾಕೂಟವನ್ನು ಮುಂಜಾಗೃತ ಕ್ರಮಗಳೊಂದಿಗೆ ನಡೆಸಲಾಗಿತ್ತು. ಇದೀಗ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಮತ್ತೆ ಕೊರೋನಾ ಭೀತಿ ಎದುರುಆಗಿದೆ.
ಆಸ್ಟ್ರೇಲಿಯಾ ಆಟಗಾರರಲ್ಲಿ ಕೋರೋನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ಎಲ್ಲರಿಗೂ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ ಎಂದು ಆಸ್ಟ್ರೇಲಿಯಾದ ಒಲಿಂಪಿಕ್ ತಂಡದ ಮೇಯರ್ಸ್ ಹೇಳಿದ್ದಾರೆ. ಅಲ್ಲದೆ ಅವರ ಜೊತೆಗಿರುವ ಇತರ ಕ್ರೀಡಾಪಟುಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.