ಬೆಂಗಳೂರು, ಜುಲೈ 23: ಯಲಹಂಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರತಿ ತಿಂಗಳು 8 ಕೋಟಿ ರೂ. ಸಂಗ್ರಹವಾಗುತ್ತದೆ. ಈ ಹಣ ಮೇಲಧಿಕಾರಿಗಳಿಗೆ ವರ್ಗಾವಣೆಯಾಗುತ್ತಿದೆ ಎಂದು ಯಲಹಂಕದ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಆರೋಪಿಸಿದರು. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ಯಲಹಂಕದ ಸುತ್ತಮುತ್ತ ಸುಮಾರು 100ಕ್ಕೂ ಹೆಚ್ಚು ಅಕ್ರಮ ಬಡಾವಣೆಗಳಿವೆ. ಯಲಹಂಕ ಸುತ್ತಮುತ್ತಲಿನ ಕಂದಾಯ ಇಲಾಖೆಯ 100 ಎಕರೆ ಕೃಷಿ ಭೂಮಿಯನ್ನು ಅಕ್ರಮವಾಗಿ ವಾಣಿಜ್ಯ ಅಥವಾ ನಿವಾಸಕ್ಕಾಗಿ ಪರಿವರ್ತನೆ ಮಾಡಲಾಗಿದೆ. ಈ ಅಕ್ರಮ ಬಡಾವಣೆಗಳು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲ. ಮತ್ತು ಈ ಬಡಾವಣೆಗಳಲ್ಲಿ ವಾಸಿಸುವವರು ನಖಲಿ ದಾಖಲೆಗಳನ್ನು ಹೊಂದಿದ್ದಾರೆ ಎಂದು ಸದನಕ್ಕೆ ತಿಳಿಸಿದರು.
ಸಬ್ ರಿಜಿಸ್ಟ್ರಾರ್ ಅಧಿಕಾರಿಗಳು ಪ್ರತಿ ನೋಂದಣಿಗೆ 35,000 ರೂ. ಸಂಗ್ರಹಿಸುತ್ತಾರೆ. ಈ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಗೆ ಪ್ರತಿ ತಿಂಗಳು ಸುಮಾರು 8 ಕೋಟಿ ರೂ. ಹಣ ಅಕ್ರಮವಾಗಿ ಹರಿದು ಬರುತ್ತಿದೆ. ಈ ಹಣವನ್ನು ಉನ್ನತಾಧಿಕಾರಿಗಳಿಗೆ ಪಾವತಿಸಲಾಗುತ್ತಿದೆ. ಆ ಉನ್ನತಾಧಿಕಾರಿಗಳು ಯಾರೆಂದು ನಮಗೆ ತಿಳಿದಿಲ್ಲ ಎಂದು ಹೇಳಿದರು.
ಈ ಬಡಾವಣೆಗಳಲ್ಲಿ 20 ಅಡಿ ಅಗಲದ ರಸ್ತೆಗಳಿದ್ದು, ಯಾವುದೇ ಸೌಕರ್ಯಗಳಿಲ್ಲ. ನಾವು ಮತ ಯಾಚನೆ ಮಾಡಲು ಅಲ್ಲಿಗೆ ಹೋಗುವುದರಿಂದ, ನಮ್ಮ ಶಾಸಕರ ನಿಧಿಯಿಂದ ಸೌಕರ್ಯಗಳನ್ನು ಒದಗಿಸಲು ಖರ್ಚು ಮಾಡುತ್ತೇವೆ ಎಂದು ಹೇಳಿದರು.