ನವದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿಯೇ ಜನರ ಕುತೂಹಲ ಹೆಚ್ಚಾಗಿದೆ. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ಮೊಸರು ತಿನ್ನಿಸಿ ಶುಭ ಹಾರೈಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 23) ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 2024ರ ಬಜೆಟ್ ಮಂಡನೆಗೆ ಮುನ್ನ ಸಿಹಿ ಹಾಕಿದ ಮೊಸರು ತಿನ್ನಿಸಿದರು. ಇದನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ತೆರಳುವ ಮೊದಲು ರಾಷ್ಟ್ರಪತಿಗಳನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು. ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರ್ಣಾಯಕ ಎರಡನೇ ಅವಧಿಗೆ ಆಯ್ಕೆಯಾದಾಗ 2019ರಲ್ಲಿ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರು ಅಂದಿನಿಂದ ಪ್ರತಿ ವರ್ಷವೂ ಕೇಂದ್ರ ಬಜೆಟ್ ಅನ್ನು ನಿರಂತರವಾಗಿ ಮಂಡಿಸಿದ್ದಾರೆ.