ಕಾರವಾರ: ಕಾರವಾರದಿಂದ 50 ನಾಟಿಕಲ್ ಮೈಲಿ ದೂರದ ಸಮುದ್ರದ ಮಧ್ಯದ ಕಂಟೈನರ್ ಸಾಗಿಸುತ್ತಿದ್ದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಹೆಲಿಕಾಪ್ಟರ್ ಹಾಗೂ ಇತರ ಬೋಟುಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಎಂ.ವಿ ಮೆಸಕ್ ಫ್ರಾಂಕ್ ಫರ್ಟ್ ಹೆಸರಿನ ಕಂಟೈನರ್ ಸಾಗಿಸುವ ಹಡಗು ಜು. 2 ರಂದು ಮಲೇಷಿಯಾದಿಂದ ಹೊರಟಿತ್ತು. ಜು. 21ಕ್ಕೆ(ನಾಳೆ) ಶ್ರೀಲಂಕಾಗೆ ತಲುಪಬೇಕಿತ್ತು. ಆದರೆ, ಕಾರವಾರ ತೀರದ ಸಮುದ್ರ ಮಧ್ಯ ಇದ್ದಕ್ಕಿದ್ದಂತೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೇ, ಹಲವು ಕಂಟೇನರ್ಗಳಿಗೆ ಅಗ್ನಿ ಆವರಿಸಿದೆ.
ಈ ಅಗ್ನಿ ಅವಘಡದ ಬಗ್ಗೆ ಮುಂಬೈನ ಮೆರಿಟೈಮ್ ರೆಸ್ಜ್ಯೂ ಕೋಆರ್ಡಿನೇಶನ್ ಸೆಂಟರ್‌ಗೆ ಮಾಹಿತಿ ರವಾನೆಯಾಗಿದೆ. ಅಲ್ಲಿಂದ ಬಂದ ಸಂದೇಶದ ಮೇರೆಗೆ ಕೋಸ್ಟ್‌ಗಾರ್ಡ್‌ನ ಡಾರ್ನಿಯರ್ ಏರ್‌ಕ್ರಾಫ್ಟ್, ಸಚೇತ್, ಸುಜೀತ್, ಸಾಮ್ರಾಟ್ ಹೆಸರಿನ ಬೋಟುಗಳು ಹಾಗೂ ಒಂದು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ.