ಸಂಕೇಶ್ವರ: ಕೃಷಿ ಇಂಜೀನಿಯರಿಂಗ್ ಕ್ಷೇತ್ರದಲ್ಲಿ ಹೊಸ-ಹೊಸ ಅವಿಷ್ಕಾರಗಳು ನಡೆದಿದ್ದು, ಅದರ ಲಾಭವನ್ನು ರೈತರು ಪಡೆದು ತಮ್ಮ ಉತ್ಪನ್ನವನ್ನು ವೃದ್ದಿಸಿಕೊಳ್ಳಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ ಕರೆ ನೀಡಿದರು.
ಸಮೀಪದ ಅಮ್ಮಿನಭಾವಿ ಗ್ರಾಮದಲ್ಲಿ ಸ್ವಾಭಿಮಾನ ಆತ್ಮ ರೈತ ಅಭಿವೃದ್ದಿ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಏಕ ಕಾಲಕ್ಕೆ 4 ಸಾಲುಗಳಲ್ಲಿ ಸ್ವಯಂ ಕೀಟನಾಶಕ ಸಿಂಪಡಿಸುವ ಯಂತ್ರವನ್ನು ಉದ್ಘಾಟಿಸಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೃಷಿಯಲ್ಲಿ ಕೆಲಸ ಮಾಡಲು ಜನರು ಸಿಗುತ್ತಿಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಬೀಜ ಬಿತ್ತನೆ, ರಸ ಗೊಬ್ಬರ ಹಾಕುವಿಕೆ, ಕೀಟನಾಶಕ ಸಿಂಪಡನೆ ಆಗುತ್ತಿಲ್ಲ.
ಇದರಿಂದ ಬೆಳೆಗಳಿಗೆ ಸರಿಯಾದ ಆರೈಕೆ ಆಗುತ್ತಿಲ್ಲ.ಹೀಗಾಗಿ ಕೃಷಿ ಉತ್ಪನ್ನವು ಕಡಿಮೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೃಷಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿನೂತನ ಸಂಶೋಧನೆಗಳು ನಡೆದಿದ್ದು ಅಲ್ಲಿ ಬಿತ್ತನೆಗೆ, ರಸಗೊಬ್ಬರ ಹಾಗೂ ಕೀಟನಾಶಕ ಸಿಂಪಡನೆಗೆ ನೂತನ ಯಂತ್ರಗಳನ್ನು ತಯಾರಿಸಲಾಗುತಿದ್ದು ಅದರ ಲಾಭವನ್ನು ರೈತರು ಪಡೆಯಬೇಕು ಎಂದು ಅವರು ಹೇಳಿದರು.
ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಕೀಟನಾಶಕ, ಲಘು ಪೋಷಕಾಂಶ, ಹನಿ ಮತ್ತು ತುಂತುರು ನೀರಾವರಿ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುತಿದ್ದು, ಅದರ ಲಾಭವನ್ನು ಕೃಷಿಕರು ಪಡೆಯಬೇಕು ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಎ.ನಾಂದಣಿ ಅವರು ಮಾತನಾಡಿ,ತೋಟಗಾರಿಕಾ ಇಲಾಖೆಯಿಂದಲೂ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತಿದ್ದು ಅದರ ಪ್ರಯೋಜನ ಕೃಷಿಕರು ಪಡೆಯಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಕೃಷಿ ಇಲಾಖೆಯ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಸಮೀರ ಲೋಕಾಪೂರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕಾದಂಬರಿ ಪಾಟೀಲ, ಶ್ರದ್ದಾ ಪಾಟೀಲ ಸಹಕಾರಿ ಧುರೀಣರಾದ ಪರಗೌಡ ಪಾಟೀಲ, ಪತ್ರಕರ್ತ ಸುರೇಶ ಮಂಜರಗಿ, ನಿರಂಜನ ಪಾಟೀಲ,ಸ್ವಾಭಿಮಾನ ಆತ್ಮಾ ರೈತ ಅಭಿವೃದ್ದಿ ಸಂಘದ ಅಧ್ಯಕ್ಷ ಬಸವರಾಜ ಹುಣಚಾಳಿ, ಕಾರ್ಯದರ್ಶಿ ಅಪ್ಪಾಸಾಹೇಬ ನಿರಲಕಟ್ಟಿ, ಸಂಚಾಲಕರಾದ ಅಸಿಫ್ ಮುಲ್ಲಾ, ಬಸ್ಸಪ್ಪಾ ಹುಣಚಾಳಿ, ರಾಮಪ್ಪಾ ಮಗದುಂ, ದುಂಡಪ್ಪಾ ಖಂಡುಗೋಳ, ಬಾಳಪ್ಪಾ ಹುಣಚಾಳಿ ಹಾಜರಿದ್ದರು.