ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ ಬಂಪರ್ ಬಹುಮಾನ

Ravi Talawar
ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ ಬಂಪರ್ ಬಹುಮಾನ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 19: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ನಗರದಲ್ಲಿ 524 ಪ್ರಕರಣಗಳು ವರದಿಯಾಗಿವೆ. ಇತ್ತ ಡೆಂಗ್ಯೂಗೆ ಕಡಿವಾಣ ಹಾಕಲು ಮನೆ ಮನೆ ಸರ್ವೇ ಮಾಡುತ್ತೇವೆ ಎಂದು ಹೊರಟಿದ್ದ ಬಿಬಿಎಂಪಿ, ಇದೀಗ ಇದರ ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ಮುಂದಾಗಿದೆ. ಸದ್ಯ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿದವರಿಗೆ ಬಂಪರ್ ಬಹುಮಾನ ಘೋಷಿಸಿರುವ ಪಾಲಿಕೆ, ಆ ಮೂಲಕ ಜಾಗೃತಿ ಮೂಡಿಸಲು ಹೊರಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಡೆಂಗ್ಯೂ ಕುರಿತ ರೀಲ್ಸ್​ಗಳನ್ನು ಆಹ್ವಾನಿಸಿರುವ ಪಾಲಿಕೆ, ಮೊದಲ ಐದು ಉತ್ತಮ ರೀಲ್ಸ್​ಗಳಿ ತಲಾ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ದ್ವೀತಿಯ ಬಹುಮಾನದಲ್ಲಿ ಐದು ಜನರಿಗೆ ತಲಾ 10 ಸಾವಿರ ರೂಪಾಯಿ ನಿಗದಿ ಮಾಡಿದ್ದು, ಯಾವ ಶಾಲೆ ಹೆಚ್ಚು ವಿದ್ಯಾರ್ಥಿಗಳ ಬಳಿ ರೀಲ್ಸ್ ಮಾಡಿಸುತ್ತದೆಯೋ ಆ ಶಾಲೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಅಲ್ಲದೇ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜಿಸೋ ಶಿಕ್ಷಕಿಯರಿಗೂ 35 ಸಾವಿರ ರೂಪಾಯಿ ಬಹುಮಾನದ ಆಫರ್ ಕೊಟ್ಟಿದೆ.

ಇತ್ತ ಬಿಬಿಎಂಪಿಯ ಈ ರೀಲ್ಸ್ ಕಾಂಪಿಟೇಷನ್​ಗೆ ಸಾರ್ವಜನಿಕರಿಂದ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಪಾಲಿಕೆ ಡೆಂಗ್ಯೂ ಬಗ್ಗೆ ಅರಿವು ಮೂಡಿಸಲು ಹೊರಟಿರೋದೇನೋ ಸರಿ. ಆದ್ರೆ ನಗರದಲ್ಲಿ ಸರಿಯಾಗಿ ಸ್ವಚ್ಛತೆ ಕಾಪಾಡಬೇಕು, ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಮಕ್ಕಳಿಗೆ ಈ ರೀತಿ ರೀಲ್ಸ್ ಮಾಡಿಸುತ್ತಿರುವುದರಿಂದ ಏನೂ ಪ್ರಯೋಜನ ಇಲ್ಲ ಅಂತಾ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀಲ್ಸ್ ಸ್ಪರ್ಧೆಗೆ ಸೋಷಿಯಲ್ ಮೀಡಿಯಾ ಬಳಸಿಕೊಳ್ಳುತ್ತಿರುವ ಪಾಲಿಕೆಯ ಆರೋಗ್ಯ ವಿಭಾಗ, ರೀಲ್ಸ್ ಹಂಚಿಕೊಂಡ ಪ್ರತಿಯೊಬ್ಬರಿಗೂ ಡೆಂಗ್ಯೂ ವಾರಿಯರ್ ಎಂಬ ಪಟ್ಟ ನೀಡುತ್ತಿದೆ.

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಮುಂದಾಗಿರೋದು ಸರಿ, ಆದ್ರೆ ಈ ಕೆಲಸ ಬರೀ ರೀಲ್ಸ್​​ಗೆ ಸೀಮಿತವಾಗಬಾರದು. ಲಕ್ಷ ಲಕ್ಷ ಹಣವನ್ನ ರೀಲ್ಸ್ ಗೆ ಕೊಡುವ ಬದಲು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜನರು ಸಲಹೆ ನೀಡುತ್ತಿದ್ದು, ಪಾಲಿಕೆಯ ಈ ರೀಲ್ಸ್ ಸ್ಪರ್ಧೆ ಡೆಂಗ್ಯೂ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆಯಾ ಅಥವಾ ಪಾಲಿಕೆ ಬೊಕ್ಕಸದ ಹಣ ಖಾಲಿ ಮಾಡಲು ದಾರಿಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

WhatsApp Group Join Now
Telegram Group Join Now
Share This Article