ರಾಯ್ಪುರ: ಛತ್ತೀಸ್ಗಢದಲ್ಲಿ ಮತ್ತೆ ಮಾವೋವಾದಿಗಳ ಅಟ್ಟಹಾಸ ಮುಂದುವರಿದಿದೆ. ಬಿಜಾಪುರದ ತಾರೆಮ್ನಲ್ಲಿ ಶಂಕಿತ ಮಾವೋವಾದಿಗಳು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಿದ್ದು, ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ. ರಾಜ್ಯ ಕಾರ್ಯಪಡೆಯ ಮುಖ್ಯ ಕಾನ್ಸ್ಟೇಬಲ್ ಭರತ್ ಲಾಲ್ ಸಾಹು ಮತ್ತು ಕಾನ್ಸ್ಟೇಬಲ್ ಸತೇರ್ ಸಿಂಗ್ ಮೃತರು
ತಾರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡಿಮಾರ್ಕಾ ಅರಣ್ಯದಲ್ಲಿ ಬುಧವಾರ ರಾತ್ರಿ ಐಇಡಿ ಸ್ಫೋಟ ಸಂಭವಿಸಿದೆ. ಭದ್ರತಾ ಪಡೆ ಸಿಬ್ಬಂದಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ನಡುವಿನ ಪ್ರದೇಶದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಂಡ ಶೋಧ ಕಾರ್ಯ ನಡೆಸಿತ್ತು. ಹಿಂದಿರುಗುವ ವೇಳೆ ಐಇಡಿ ಸ್ಫೋಟಗೊಂಡು ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ತರಬೇತಿ ಪಡೆದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ ವಿಶೇಷ ಕಾರ್ಯಾಚರಣೆ ಘಟಕವಾದ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್ (CoBRA) ಜತೆಗೂಡಿ ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. “ಹೆಚ್ಚುವರಿ ಭದ್ರತಾ ಪಡೆಗಳನ್ನು ಈ ಪ್ರದೇಶಕ್ಕೆ ಕಳುಹಿಸಲಾಗಿದೆ ಮತ್ತು ಗಾಯಗೊಂಡ ಎಸ್ಟಿಎಫ್ (ವಿಶೇಷ ಕಾರ್ಯಪಡೆ) ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.