ಬೆಂಗಳೂರು: ವಿಧಾನ ಮಂಡಲ ಮಳೆಗಾಲದ ಅಧಿವೇಶನ ಇಂದು ಇನ್ನಷ್ಟು ರಂಗೇರಲಿದೆ. ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದ ಕುರಿತು ನಿನ್ನೆ ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ವಿಪಕ್ಷ ನಾಯಕ ಆರ್. ಆಶೋಕ್ ಅವರು ಈ ಚರ್ಚೆಯನ್ನು ಮುನ್ನಡೆಸಿದ್ದರು. ಇಂದು ಅದು ಮುಂದುವರಿಯಲಿದ್ದು, ಮುಖ್ಯಮಂತ್ರಿ
ಸಿದ್ದರಾಮಯ್ಯ ಕೂಡ ಇದಕ್ಕೆ ಉತ್ತರ ನೀಡಲಿದ್ದಾರೆ.
ನಿನ್ನೆ ಮಾತನಾಡಿದ ಆರ್. ಅಶೋಕ್, ಸರ್ಕಾರದ ತಪ್ಪು ನಡೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹೈಕಮಾಂಡ್‌ಗೆ ಕಪ್ಪಕಾಣಿಕೆ ಸಲ್ಲಿಸಲು ನಿಗಮದ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದಿದ್ದ ಅಶೋಕ್, 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಈ ಹಣ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೇಗೆ ವಿನಿಯೋಗವಾಗಬೇಕಿತ್ತು, ಹೇಗೆ ಅಕ್ರಮವಾಗಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದರು. ಆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಇಂದು ಸಹ ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಂದ ಈ ಚರ್ಚೆ ಮುಂದುವರಿಯಲಿದೆ. ಬಿಜೆಪಿಯ ಸಿಟಿ ರವಿ, ಸುನೀಲ್ ಕುಮಾರ್, ಯತ್ನಾಳ್ ಮುಂತಾದವರು ಈ ಚರ್ಚೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವ ನಿರೀಕ್ಷೆ ಇದೆ. ನಿನ್ನೆ ಆಶೋಕ್ ಮಾತನಾಡುವಾಗಲೇ ಈ ಬಗ್ಗೆ ಸಿದ್ದರಾಮಯ್ಯ ಸುಳಿವು ನೀಡಿದ್ದರು. ʼನಿಮ್ಮ ವಾದವನ್ನ ಸಮಾಧಾನವಾಗಿ ಕೇಳ್ತೀನಿ. ನಾನು ಉತ್ತರ ಕೊಡುವಾಗಲೂ ಅಷ್ಟೇ ಸಮಾಧಾನದಿಂದ ಕೇಳಬೇಕುʼ ಎಂದಿದ್ದರು.