ಬೆಂಗಳೂರು: 1.73 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇದ್ದು ಆದಷ್ಟು ಬೇಗ ಈ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಸರ್ಕಾರದ ಅಂತ್ಯದಲ್ಲಿ 2.95 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇತ್ತು. ಅದರಲ್ಲಿ ನಾವು ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದವರಲ್ಲಿ 236162 ಅರ್ಹರಿದ್ದು, ಬಾಕಿ 56930 ಅರ್ಜಿದಾರರು ಬಿಪಿಎಲ್ ಕೆಳಗೆ ಬರಲ್ಲ. ಅರ್ಹರಲ್ಲಿ 62 ಸಾವಿರ ಕಾರ್ಡ್ ಗಳನ್ನು ಈಗಾಗಲೇ ಪಟ್ಟಿಗೆ ತಂದು ದವಸ ಧಾನ್ಯ ಕೊಡಲಾಗುತ್ತಿದೆ. ಬಾಕಿ ಕಾರ್ಡ್ಗಳ ಪರಿಶೀಲಿಸುತ್ತಿದ್ದು, ಬಾಕಿ ಇರುವ 1.73 ಲಕ್ಷ ಕಾರ್ಡ್ದಾರರಿಗೂ ಆದಷ್ಟು ಬೇಗ ಪಡಿತರ ವಿತರಿಸಲಾಗುತ್ತದೆ ಎಂದರು.
ಆರೋಗ್ಯ ಸಂಬಂಧಿ ಚಿಕಿತ್ಸೆ ಪಡೆಯಲು ಪಡಿತರ ಕಾರ್ಡ್ ವಿತರಿಸಲು ಕಾಲಮಿತಿ ಇಲ್ಲ. ವಾರದಲ್ಲಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೂ ಎಪಿಎಲ್ ಮತ್ತು ಬಿಪಿಎಲ್ ಸೇರಿ 4 ಕೋಟಿ ಜನರ ಮೀರಿ ಅಧಿಕ ಕಾರ್ಡ್ಗಳ ವಿತರಣೆ ಮಾಡಿದ್ದೇವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸುತ್ತಿದ್ದಂತೆ ಕೂಡಲೇ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.