ಬೆಂಗಳೂರು: ಬಿಡಿ ಮಾತ್ರೆಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದ ನಗರದ ಮೆಡಿಕಲ್ ಶಾಪ್ವೊಂದರ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆಯು ಎರಡು ದಿನಗಳ ಕಾಲ ಅಮಾನತುಗೊಳಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆಯ ಆದೇಶದ ಅನ್ವಯ ಜುಲೈ 9 ಮತ್ತು 10ರಂದು ಮೆಡಿಕಲ್ ಶಾಪ್ ಮುಚ್ಚಲಾಗಿತ್ತು.
ಬಿಡಿ ಮಾತ್ರೆ ಮಾರಾಟ ನಿರಾಕರಣೆ, ಬಿಲ್ ನೀಡಲು ವಿಳಂಬ ಸೇರಿ ಪರವಾನಗಿಯಲ್ಲಿನ ಷರತ್ತುಬದ್ಧ ಅಂಶಗಳ ಉಲ್ಲಂಘನೆ ಕಂಡುಬಂದಿದ್ದರಿಂದ ಹಲಸೂರಿನ ಕೆಂಬ್ರಿಡ್ಜ್ ರಸ್ತೆಯ ಟ್ರಸ್ಟ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಮೆಡಿಕಲ್ ಶಾಪ್ ಪರವಾನಗಿಯನ್ನು ಎರಡು ದಿನಗಳ ಕಾಲ ಔಷಧ ನಿಯಂತ್ರಣ ಇಲಾಖೆಯು ರದ್ದುಗೊಳಿಸಿತ್ತು. ಈ ಅವಧಿಯಲ್ಲಿ ಔಷಧ ಮಾರಾಟ, ಖರೀದಿ ಹಾಗೂ ವಿತರಣೆ ಮಾಡಕೂಡದು ಎಂದು ಸಹಾಯಕ ಔಷಧ ನಿಯಂತ್ರಕಿ ಎ.ಎಂ.ಸನೋಫರ್ ಜಾನ್ ತಮ್ಮ ಆದೇಶದಲ್ಲಿ ತಿಳಿಸಿದ್ದರು.
ಪ್ರಕರಣ ವಿವರ: ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬುವರು ತಮಗೆ ಅನಾರೋಗ್ಯ ಹಿನ್ನೆಲೆ ವೈದ್ಯರ ಸೂಚನೆ ಮೇರೆಗೆ ಮಾತ್ರೆಗಳನ್ನ ಖರೀದಿಸಲು ಕಳೆದ ಮೇ 5ರಂದು ಮೆಡಿಕಲ್ ಶಾಪ್ಗೆ ಹೋಗಿ ಎರಡು ಬಿಡಿ ಮಾತ್ರೆಗಳನ್ನು ಕೇಳಿದ್ದರು. ಆದರೆ, ಮೆಡಿಕಲ್ ಶಾಪ್ನವರು ಎರಡು ಮಾತ್ರೆ ನೀಡುವುದಿಲ್ಲ. ಖರೀದಿಸಿದರೆ 874 ರೂಪಾಯಿ ಕೊಟ್ಟು 14 ಮಾತ್ರೆವಿರುವ ಶೀಟ್ ಪಡೆಯಬೇಕು ಎಂದು ಶಾಪ್ ಸಿಬ್ಬಂದಿ ಹೇಳಿದ್ದರು.