ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿರುವ ಬೆನ್ನಲ್ಲೇ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ಗೂ ಬಂಧನದ ಭೀತಿ ಎದುರಾಗಿದೆ.
ಪ್ರಕರಣದ ತನಿಖೆ ಆರಂಭಿಸಿರುವ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಅವರ ನಿವಾಸಗಳಲ್ಲಿ ಶೋಧ ನಡೆಸಿದ್ದರು. ಶುಕ್ರವಾರ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಂತೆ ಇತ್ತ ಎಸ್ಐಟಿ ಅಧಿಕಾರಿಗಳ ಮುಂದೆ ಬಸವನಗೌಡ ದದ್ದಲ್ ಹಾಜರಾಗಿದ್ದರು. ಪ್ರಕರಣದಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಬಸವನಗೌಡ ದದ್ದಲ್ ಅವರಿಗೆ ಎಸ್ಐಟಿ ಸೂಚಿಸಿದೆ. ಈ ನಡುವೆ ನಾಗೇಂದ್ರ ಅವರನ್ನು ಇಡಿ ಬಂಧನಕ್ಕೊಳಪಡಿಸಿದ್ದು, ಕಸ್ಟಡಿಗೆ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಬಸವನಗೌಡ ದದ್ದಲ್ ಅವರಿಗೂ ಬಂಧನದ ಭೀತಿ ಎದುರಾಗಿದೆ ಎನ್ನಲಾಗಿದೆ.