ಬೆಂಗಳೂರು,: ತಮಿಳುನಾಡಿಗೆ ಜುಲೈ 31 ರವರೆಗೆ ಪ್ರತಿನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನಿಯಂತ್ರಣ ಸಮಿತಿ ಆದೇಶ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜುಲೈ 12) ಬೆಂಗಳೂರಿನಲ್ಲಿ ಹಿರಿಯ ಅಧೀಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು.
ಈ ಸಭೆಯಲ್ಲಿ ಕಾವೇರಿ ನೀರಿನ ಸ್ಥಿತಿಗತಿ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದು, ಯಾವುದೇ ಕಾರಣಕ್ಕೂ ನೀರು ಬಿಡದಿರಲು ನಿರ್ಧರಿಸಲಾಗಿದೆ. ಅಲ್ಲದೇ ಕಾವೇರಿ ನಿಯಂತ್ರಣ ಸಮಿತಿ ಆದೇಶದ ವಿರುದ್ಧ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಇದೇ ಜುಲೈ 14ರಂದು ಸರ್ವ ಪಕ್ಷಗಳ ಸಭೆ ಕರೆಯಲು ನಿರ್ಧರಿಸಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನೀರು ಬಿಡುವುದಕ್ಕೆ ಆಗುವುದಿಲ್ಲ. ಈ ಆದೇಶದ ವಿರುದ್ಧ ಅಪೀಲ್ ಹಾಕಬೇಕು ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇವೆ. ನಾನು ಹಾಗೂ ಎಲ್ಲಾ ಸಚಿವರು ಈ ನಿರ್ಧಾರ ಕೈಗೊಂಡಿದ್ದೇವೆ. ಜುಲೈ 14ರಂದು ಸರ್ವಪಕ್ಷಗಳ ಸಭೆ ಕರೆಯಲು ನಿರ್ಧರಿಸಲಾಗಿದ್ದು, ಒಟ್ಟಾಗಿ ಇದರ ವಿರುದ್ದ ನಿಲ್ಲಬೇಕಾಗಿದೆ ಎಂದು ಹೇಳಿದರು.
ತಮಿಳುನಾಡಿಗೆ ಪ್ರತಿದಿನ 1 TMC ನೀರು ಹರಿಸುವಂತೆ ಆದೇಶ ಹೊರಡಿಸಿದೆ. ಸಿಡಬ್ಲ್ಯುಆರ್ಸಿ ಆದೇಶದ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ವಪಕ್ಷ ಸಭೆ ಕರೆಯುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ. ಕೇಂದ್ರ ಸಚಿವರು, ಆ ಭಾಗದ ಸಂಸದರನ್ನು ಆಹ್ವಾನಿಸುತ್ತೇವೆ. ಕಾವೇರಿ ನದಿ ಪಾತ್ರದ ಶಾಸಕರನ್ನೂ ಸಭೆಗೆ ಆಹ್ವಾನಿಸುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಏನು ಹೆಜ್ಜೆ ಇಡಬೇಕೆಂಬ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು.