ಮುಡಾ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನೆ: ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

Ravi Talawar
ಮುಡಾ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನೆ: ಬಿಜೆಪಿ ನಾಯಕರು ಪೊಲೀಸರ ವಶಕ್ಕೆ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 12: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಖಂಡಿಸಿ ಪ್ರತಿಭಟನೆ ನಡೆಸಲು ಮೈಸೂರಿಗೆ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿರುವುದಕ್ಕೆ ಕಮಲ ಪಾಳೆಯ ಕಿಡಿ ಕಾರಿದೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಟೀಕಿಸಿದೆ.

‘ಮುಡಾ ಹಗರಣ ಖಂಡಿಸಿ, ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಗೆ ತೆರಳುತ್ತಿದ್ದ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಹಾಗೂ ಪಕ್ಷದ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರನ್ನು ಬೆಂಗಳೂರಿನಲ್ಲೇ ರಣಹೇಡಿ ಕಾಂಗ್ರೆಸ್ ಸರ್ಕಾರ ಬಂಧಿಸಿದೆ. ಮಾತೆತ್ತಿದರೆ ಸಂವಿಧಾನ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಬಡಾಯಿಕೊಚ್ಚಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು, ವಿಪಕ್ಷಗಳ ಹೋರಾಟ ಹತ್ತಿಕ್ಕುವ ಮೂಲಕ ಸರ್ವಾಧಿಕಾರಿ ನಡೆ ಪ್ರದರ್ಶನ ಮಾಡಿದ್ದಾರೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಮುಡಾ ಹಗರಣದಲ್ಲಿ ತಮ್ಮ ಪಾತ್ರವಿರುವುದನ್ನು ಒಪ್ಪಿಕೊಳ್ಳದ ಸಿಎಂ ಸಿದ್ದರಾಮಯ್ಯನವರು, ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ದೇಶದ ಜನರ ದಾರಿ ತಪ್ಪಿಸಲು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಕೈಯಲ್ಲಿ ಸಂವಿಧಾನ ಪ್ರತಿ ಪ್ರದರ್ಶನ ಮಾಡುತ್ತಾರೆ. ಶ್ರೇಷ್ಠ ಸಂವಿಧಾನವೇ ವಿಪಕ್ಷಗಳಿಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಹೋರಾಟ ನಡೆಸುವ ಸ್ವಾತಂತ್ರ್ಯ ನೀಡಿದೆ ಎಂಬ ಅರಿವಿಲ್ಲ ಎಂದು ಬಿಜೆಪಿ ಉಲ್ಲೇಖಿಸಿದೆ.

WhatsApp Group Join Now
Telegram Group Join Now
Share This Article