ಬೆಳಗಾವಿ: ಬಸವಣ್ಣವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟುಕೊಂಡು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಬಸವಣ್ಣನವರ ಕವಚ ನಮ್ಮನ್ನು ಸದಾ ಆಶೀರ್ವದಿಸುತ್ತಿದ್ದು, ಮುಂದೆಯೂ ಲಿಂಗಾಯತ ಸಮುದಾಯದ ಆಶೀರ್ವಾದ ನಮ್ಮ ಮೇಲಿ ಇರಲೆಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಕೋರಿದರು.
ಮಹಾಂತೇಶ ನಗರದಲ್ಲಿರುವ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಬೆಳಗಾವಿ ಘಟಕ ಹಮ್ಮಿಕೊಂಡಿದ್ದ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ಜಾತಿಭೇದವಿಲ್ಲದ, ವರ್ಗ ತಾರತಮ್ಯವಿಲ್ಲದ, ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲೇ ನಡೆಯಿತು. ಅದೇ ತತ್ವಗಳನ್ನೇ ನಮ್ಮ ಸಂವಿಧಾನ ಕೂಡ ಎತ್ತಿ ಹಿಡಿದಿದೆ. ಅದೇ ಕಾರಣಕ್ಕಾಗಿ ನಾನು ಸಂಸತ್ತಿನಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆಂದು ತಿಳಿಸಿದರು.
ರಾಷ್ಟ್ರೀಯ ಬಸವದಳ ಜಿಲ್ಲಾ ಮುಖಂಡ ಅಶೋಕ ಗುಡಸ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಅವರ ಸುಪುತ್ರಿ ಪ್ರಿಯಂಕಾ ಜಾರಕಿಹೊಳಿ ಸಂಸದರಾಗಿ ಆಯ್ಕೆಯಾಗಿದ್ದು ನಮ್ಮ, ನಿಮ್ಮೆಲ್ಲರಿಗೂ ಹೆಮ್ಮೆ ತಂದಿದೆ. ನಾವು ಮಾಡುವಂತ ಕಾರ್ಯಗಳ ಮೇಲೆ ಜನ ನಮ್ಮನ್ನು ಆಯ್ಕೆ ಮಾಡುತ್ತಾರೆ. ಸಚಿವ ಸತೀಶ್ ಅವರ ಅಭಿವೃದ್ಧಿ ಕೆಲಸಗಳು, ಸರ್ವ ಸಮುದಾಯವನ್ನು ಪ್ರೀತಿಯಿಂದ ಕಾಣುವ ಅವರ ಮನೋಭಾವದಿಂದಲೇ ಪ್ರಿಯಂಕಾ ಜಾರಕಿಹೊಳಿ ಅವರು ಸಂಸದರಾಗಲು ಕಾರಣವಾಗಿದೆ ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ 45 ರಾಷ್ಟ್ರೀಯ ಬಸವದಳ ದಳದ ಶಾಖೆಗಳಿವೆ. ಚುನಾವಣೆಕ್ಕಿಂತ ಮುಂಚೆ ನಮ್ಮನ್ನು ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಬೆಂಬಲ ಕೋರಿದ್ದರು. ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುದ್ದಾಗಿ ತಿಳಿಸಿ, ನಿಮ್ಮನ್ನು ಸಂಸದರಾಗಿ ಆಯ್ಕೆ ಮಾಡಿದ್ದೇವೆ. ನಮ್ಮ ವೈಯಕ್ತಿಕ ಕೆಲಸಗಳಕ್ಕಿಂತ ಹಳ್ಳಿ, ಹಳ್ಳಿಯಲ್ಲಿ ವಚನ ಸಾಹಿತ್ಯಗಳ ಗ್ರಂಥಲಯಗಳು ನಿರ್ಮಿಸಬೇಕೆಂದು ಮನವಿ ಮಾಡಿದರು.
ಲಿಂಗಾಯತ ಸಮಾಜದ ಮುಖಂಡರಾದ ಅಶೋಕ ಬೆಂಡಿಗೇರಿ, ಸಂತೋಷ ಗುಡಸ, ಶಂಕರ ಗುಡಸ, ಆನಂದ ಗುಡಸ, ಕೆ. ಶರಣಪ್ರಸಾದ, ಎಸ್.ಎಸ್. ಪಾಟೀಲ್ ಮಾತನಾಡಿ, ಬುದ್ದ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳ ಬಗ್ಗೆ ಸರ್ವ ಸಮಾಜಗಳಿಗೆ ತಿಳಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಸುಪುತ್ರಿಗೂ ಸಮಾಜ ಸೇವೆ ಸಲ್ಲಿಸುವಂತೆ ಸೂಚಿಸಿದ್ದು ಸಂತಸದ ವಿಚಾರ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸಂಸದರಾದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಗುತ್ತಿಗೆದಾರರ ಸಂಘ, ಲಿಂಗಾಯತ ಧರ್ಮ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.
ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ: ಬೆಳಗಾವಿ ರಾಮತೀರ್ಥ ನಗರದಲ್ಲಿರುವ ಕಾರ್ಯಸಿದ್ದಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿದರು.
ವಿನಯ ನಾವಲಗಟ್ಟಿ ಮನೆಗೆ ಭೇಟಿ: ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರ ಮನೆಗೆ ಭೇಟಿ ನೀಡಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ವಿನಯ ನಾವಲಗಟ್ಟಿ ಅವರ ತಂದೆ, ತಾಯಿ ಆಶೀರ್ವಾದವನ್ನು ಪಡೆದು ಸನ್ಮಾನ ಸ್ವೀಕರಿಸಿದರು. ಇದೇ ವೇಳೆ ವಿನಯ ನಾವಲಗಟ್ಟಿ ಕುಟುಂಬಸ್ಥರು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಿಹಿ ತಿನ್ನಿಸಿ, ಆರತಿ ಬೆಳಗುವ ಮೂಲಕ ರಾಜಕೀಯ ರಂಗದಲ್ಲಿ ಯಶಸ್ಸು ದೊರೆಯಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ, ರಾಜೇಂದ್ರ ಪಾಟೀಲ್, ಸಿದ್ದಿಕ ಅಂಕಲಗಿ, ಬಸವರಾಜ ಶೇಂಗಾವಿ, ಅರ್ಜುನ ನಾಯಕವಾಡಿ, ಮಲಗೌಡ ಪಾಟೀಲ್, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಭರಂಣ್ಣ ತೋಳಿ, ವಿಜಯ ತಳವಾರ, ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ ಸೇರಿದಂತೆ ಅಪಾರ ಸಂಖ್ಯೆ ಮಹಿಳೆಯರು, ಕಾರ್ಯಕರ್ತರು ಇದ್ದರು.