ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ: ನಾಗೇಂದ್ರ, ದದ್ದಲ್ ಮನೆಗಳ ಮೇಲೆ ಇಡಿ ದಾಳಿ

Ravi Talawar
ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ: ನಾಗೇಂದ್ರ,  ದದ್ದಲ್ ಮನೆಗಳ ಮೇಲೆ ಇಡಿ ದಾಳಿ
WhatsApp Group Join Now
Telegram Group Join Now

ರಾಯಚೂರು/ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಮನೆಗಳ ಮೇಲೆ ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ನಡೆಸಿದರು.

ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ವಾರ್ಡ್ ಸಂಖ್ಯೆ 2, ಆರ್‌ಆರ್ (ರಾಮ್ ರಹೀಮ್) ಕಾಲೊನಿಯಲ್ಲಿರುವ ದದ್ದಲ್​ ಮನೆಯ ಮೇಲೆ ದಾಳಿ ನಡೆಸಿರುವ ಮೂವರು ಅಧಿಕಾರಿಗಳ ತಂಡ, ಬೆಳಗ್ಗೆ 7 ಗಂಟೆಯಿಂದ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಇಬ್ಬರು ವಶಕ್ಕೆ: ಬಳ್ಳಾರಿಯಲ್ಲಿ ಬಿ.ನಾಗೇಂದ್ರ ಅವರ ಇಬ್ಬರು ಆಪ್ತ ಸಹಾಯಕರಾಗಿದ್ದ ವಿಜಯಕುಮಾರ್ ಮತ್ತು ಚೇತನ್ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮುಂಜಾನೆ, ಸಿಆರ್​ಪಿಎಫ್ ಭದ್ರತೆಯೊಂದಿಗೆ ಮೂರು ತಂಡಗಳಾಗಿ ಬಳ್ಳಾರಿಗೆ ಆಗಮಿಸಿದ ಇಡಿ ಅಧಿಕಾರಿಗಳು ನೆಹರು ಕಾಲೊನಿಯಲ್ಲಿರುವ ನಾಗೇಂದ್ರ ಮನೆ ಮೇಲೆ ದಾಳಿ ಮಾಡಿದರು.

ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ‌ ಅಧಿಕಾರಿಗಳು, ನಾಗೇಂದ್ರರ ಮನೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್​ಪಿಎಫ್‌ ಯೋಧರ ಸಹಕಾರದಿಂದ ದಾಳಿ ನಡೆಸಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರಿನ ಮನೆಯಲ್ಲೂ ಶೋಧ: ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ರಾಮ್ಕಿ ಉತ್ಸವ್​ ಅಪಾರ್ಟ್ಮೆಂಟ್​ನಲ್ಲಿರುವ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದೇ ರೀತಿ ಬಸವನಗೌಡ ದದ್ದಲ್ ನಿವಾಸವಲ್ಲದೆ, ಬೆಂಗಳೂರು ನಗರದ ಯಲಹಂಕ, ಕೋರಮಂಗಲ ಸೇರಿದಂತೆ ಏಕಕಾಲದಲ್ಲಿ 18 ಕಡೆಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article