ದಾವಣಗೆರೆ: “ಪ್ರತಾಪ್ ನನ್ನ ರಾಜಕೀಯ ಜೀವನದಲ್ಲಿ ಬಲಗೈ ಆಗಿದ್ದ. ಆತನಿಗೆ ಮಕ್ಕಳಾಗಿಲ್ಲ ಎಂಬ ಕೊರಗಿತ್ತು” ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಚನ್ನಗಿರಿ ತಾಲೂಕಿನ ಕತ್ತಲಗೆರೆಯಲ್ಲಿ ಸೋಮವಾರ ತಡರಾತ್ರಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. “ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಪ್ರತಾಪ್ ನನಗೆ ಮಗನಂತಿದ್ದ. ಮನೆಯ ತೋಟ, ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಿದ್ದ. ಆತ್ಮಹತ್ಯೆ ಮಾಡಿಕೊಳ್ಳುವಂಥದ್ದೇನೂ ಇರಲಿಲ್ಲ. ಆದರೆ ಮಕ್ಕಳಾಗಲಿಲ್ಲ ಎಂಬ ಕೊರಗಿತ್ತು. ಇದಕ್ಕೆ ಸರೊಗಸಿ (ಬಾಡಿಗೆ ತಾಯ್ತತನ) ಮೂಲಕ ಮಗು ಪಡೆಯುವ ಪ್ರಕ್ರಿಯೆಗೆ ಬೆಂಗಳೂರಿನಲ್ಲಿ ವಕೀಲರನ್ನು ಭೇಟಿ ಮಾಡಿ ಮಾತನಾಡಿದ್ದರು. ಅವರು ನೀವು ಕೋರ್ಟ್ಗೆ ಬಂದು ಹೇಳಬೇಕಾಗುತ್ತದೆ ಎಂದಿದ್ದರು. ಇದಕ್ಕೆ ಒಪ್ಪಿದ್ದ ನಾವು ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದೆವು. ಅಷ್ಟರಲ್ಲಿ ಊರಿಗೆ ಹೋಗಿ ಬರುವುದಾಗಿ ಹೇಳಿ ಈ ರೀತಿ ಮಾಡಿಕೊಂಡಿದ್ದಾನೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಬಿ.ಸಿ.ಪಾಟೀಲ್ ಅವರ ಸಹಾಯಕ ನಾಗರಾಜ್ ಬಣಕಾರ್ ಪ್ರತಿಕ್ರಿಯಿಸಿ, “ಬಿ.ಸಿ.ಪಾಟೀಲ್ ತಮ್ಮ ಇಬ್ಬರು ಅಳಿಯಂದಿರನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಬೆಳಗ್ಗೆ ಆರು ಗಂಟೆಗೆ ಸೌಮ್ಯ ಪಾಟೀಲ್, ಸೃಷ್ಟಿ ಪಾಟೀಲ್ ಮತ್ತು ಬಿ.ಸಿ.ಪಾಟೀಲ್ ಪತ್ನಿ ವನಜಾ ಪಾಟೀಲ್ ಬೆಂಗಳೂರಿಗೆ ಹೋಗಿದ್ದರು. ನಂತರ ಮಾವ ಅಳಿಯ ಒಟ್ಟಿಗೆ ಸೇರಿ ಉಪಹಾರ ಸೇವಿಸಿದ್ದರು. ಪ್ರತಾಪ್ ಅವರು ಮಾವ ಪಾಟೀಲರಿಗೆ ಊರಿಗೆ ಹೋಗುವುದಾಗಿ ತಿಳಿಸಿ, ನಂತರ ಸ್ವಗ್ರಾಮ ಕತ್ತಲಗೆರೆಗೆ ಹೋಗಿ ವಾಪಸಾಗುತ್ತೇನೆ ಎಂದಿದ್ದರು. ಆದರೆ ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದು ನಮಗೆ ಆಘಾತ ಉಂಟುಮಾಡಿದೆ” ಎಂದು ತಿಳಿಸಿದ್ದಾರೆ.