ಬೆಂಗಳೂರು, ಜು.8: ರಾಜಕಾರಣಿಗಳು, ಅಧಿಕಾರಿಗಳ ಅನುಭವದ ಮೇಲೆ ಆಡಳಿತ ಹೆಚ್ಚು ಪರಿಣಾಮಕಾರಿಯಾಗಿ ಆಗಬೇಕಿತ್ತು. 40 ವರ್ಷಗಳ ಹಿಂದೆ ಅಧಿಕಾರಿಗಳು ಕೆಲಸ ನಿರ್ವಹಿಸುವ ರೀತಿಗೂ, ಇವತ್ತಿನ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ರೀತಿಗೂ ಹೋಲಿಸಿದರೆ ಕಾರ್ಯಾಂಗ ಮತ್ತು ಶಾಸಕಾಂಗ ಈಗ ಹೆಚ್ಚು ಪರಿಣಾಮಕಾರಿಯಾಗಿ, ಗುಣಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಗೊತ್ತಾಗುತ್ತಿದೆ. ಇದು ಬಹಳ ಬೇಸರದ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ DC ಮತ್ತು CEO ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಮಹಾರಾಜರು ಎನ್ನುವ ಭಾವನೆ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಬ್ಬರೂ ಜನ ಸೇವಕರು ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಜನಸೇವೆ ಮಾಡಿ ಎಂದು ಸೂಚನೆ ನೀಡಿದರು.
ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಜನ ಸಾಮಾನ್ಯರಿಗೆ ತಲುಪಿಸಲು ಡಿಸಿ, ಎಸ್ಪಿ, ಸಿಇಒಗಳು ಕ್ರಿಯಾಶೀಲತೆಯಿಂದ, ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರದ ಕಾಳಜಿಗಳು ಜನರಿಗೆ ತಲುಪಲು ಸಾಧ್ಯ ಎಂದರು.