ಶಿವಮೊಗ್ಗ, ಜುಲೈ 08: ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ. ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆ ಇದೆ. ಇನ್ನು ನಿರ್ಧಾರ ಕೈಗೊಂಡಿಲ್ಲ. ಹಿಂದೂ ಹೋರಾಟಗಾರರಿಗೆ ಮತ್ತು ಹಿಂದುತ್ವಕ್ಕೆ ನ್ಯಾಯ ಸಿಗಲಿ. ಅಪ್ಪ-ಮಕ್ಕಳ ಕೈಯಲ್ಲಿ ಬಿಜೆಪಿ ಇರುವುದು ತಪ್ಪು. ಈ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಎಂದು ಮಾಜಿ ಸಚಿವ ಕೆಎಸ್. ಈಶ್ವರಪ್ಪ ಹೇಳಿದರು.
ತುಂಗಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿ ಬಿದ್ದಿದ್ದಾರೆ. ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಈ ಹಗರಣದಲ್ಲಿ ಸಿಎಂ ಕುಟುಂಬದವರು ಭಾಗಿಯಾಗಿದ್ದಾರೆ. ಮುಡಾ ಅಕ್ರಮ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ದೇಶದ ಗಮನ ಸೆಳೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀನಾಮೆ ನೀಡಿಲ್ಲ. ನಾಗೇಂದ್ರ, ಬಸವರಾಜ ದದ್ದಲ್ರನ್ನು ಕೂಡಲೇ ಬಂಧಿಸಬೇಕು ಎಂದರು.