ಬೆಂಗಳೂರು, ಜುಲೈ.08: ಹಗರಣದ ಆರೋಪದ ಸುಳಿಯಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ. ಸಾಲು ಸಾಲು ಹಗರಣದ ಆರೋಪಗಳೇ ಕೇಳಿ ಬರುತ್ತಿದ್ದರೆ ವಿಪಕ್ಷಗಳಿಗೆ ಇದೇ ಅಸ್ತ್ರ ಸಿಕ್ಕಂತಾಗಿದೆ. ಯಾಕೆಂದರೆ ಮೊನ್ನೆ ಮೊನ್ನೆಯಷ್ಟೇ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ ಆಗಿತ್ತು. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟಿದ್ದರು.
ವಿಪಕ್ಷ ನಾಯಕ ಆರ್.ಅಶೋಕ್ ಅಂತೂ, ಒಂದು ವಿಕೆಟ್ ಅಲ್ಲ, ಮೂರ್ನಾಲ್ಕು ವಿಕೆಟ್ ಹೋಗುತ್ತದೆ ಎಂಬ ಭವಿಷ್ಯವನ್ನೂ ನುಡಿದಿದ್ದರು. ಇದೀಗ ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೂ ಉರುಳಾಗಿದೆ. ಇನ್ನು ಗ್ಯಾರಂಟಿಗೆ ದಲಿತರ ದುಡ್ಡನ್ನ ಬಳಕೆ ಮಾಡಿದ್ದಾರೆ ಅಂತಾ ಇದೀಗ ಬಿಜೆಪಿ ಆರೋಪ ಮಾಡುತ್ತಿದೆ. ಇದೆಲ್ಲವನ್ನೂ ಇಟ್ಟುಕೊಂಡು ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಬಿಜೆಪಿ ಪ್ಲ್ಯಾನ್ ಮಾಡಿದೆ. ಹೀಗಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷಗಳಿಗೆ ನಾಲ್ಕೈದು ಅಸ್ತ್ರವೇ ಸಿಕ್ಕಂತಾಗಿದೆ.