ಬಳ್ಳಾರಿ,ಜು.06 ಜಿಲ್ಲೆಯಲ್ಲಿ ಜು.13 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಸಾರ್ವಜನಿಕರು, ಪಕ್ಷಕಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು ಹೇಳಿದರು.
ನಗರದ ತಾಳೂರು ರಸ್ತೆಯ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಿಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜೀ ಸಂಧಾನದಲ್ಲಿ ಪಾಲ್ಗೊಂಡು ತಮಗಾಗುವ ಆರ್ಥಿಕ ಹೊರೆ ಹಾಗೂ ಸಮಯ ಪೆÇೀಲಾಗುವುದನ್ನು ತಪ್ಪಿಸಲು ಈ ಲೋಕ್ ಅದಾಲತ್ ಸಹಾಯವಾಗಲಿದೆ. ರಾಜಿ ಸಂಧಾನದಲ್ಲಿ ಪ್ರಕರಣ ಇತ್ಯರ್ಥವಾದರೆ ನ್ಯಾಯಾಲಯಕ್ಕೆ ತುಂಬಿದ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 62,039 ವಿವಿಧ ಚಾಲ್ತಿ ಪ್ರಕರಣಗಳಿದ್ದು, ಅದರಲ್ಲಿ ಈಗಾಗಲೇ ರಾಜೀ ಆಗಬಹುದಾದ 8,058 ಪ್ರಕರಣಗಳನ್ನು ಗುರುತಿಸಿದ್ದು, ಇದರಲ್ಲಿ ಸಿವಿಲ್ ದಾವೆಗಳು ಅಂದರೆ ಜಮೀನುಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಮನೆ ಹಾಗೂ ನಿವೇಶನಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ದರಖಾಸ್ತು ಅರ್ಜಿಗಳು, ಕಾರ್ಮಿಕ ಪ್ರಕರಣಗಳು, ಮರಳು ಕಳ್ಳ ಸಾಗಾಣಿಕೆ ಪ್ರಕರಣಗಳು, ಚೆಕ್‍ಬೌನ್ಸ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪ್ರಕರಣಗಳು, ವೈವಾಹಿಕ ಪ್ರಕರಣಗಳು ಹಾಗೂ ರಾಜೀ ಆಗಲು ಅರ್ಹವಿರುವ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿದೆ ಎಂದರು.
ಪ್ರತಿದಿನ ರಾಜೀಗಾಗಿ ಆಯ್ಕೆ ಮಾಡಿದ ಪ್ರಕರಣಗಳನ್ನು ಸಂಬಂಧಪಟ್ಟ ವಕೀಲರು ಹಾಗೂ ಪಕ್ಷಗಾರರೊಂದಿಗೆ ಮುಂಚಿತವಾಗಿಯೇ ರಾಜೀ ಸಂಧಾನದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನ ಒಲಿಸಿ ರಾಜೀ ಸಂಧಾನ ಮಾಡಿಕೊಳ್ಳಲು ತಿಳಿಯಪಡಿಸಲಾಗುವುದು.
ಪ್ರಕರಣಗಳಿಗೆ ಸಂಬಂದಪಟ್ಟ ವಕೀಲರು, ಕಕ್ಷಿದಾರರು ಜುಲೈ 13 ರಂದು ಜರುಗುವ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಪಾಲ್ಗೊಂಡು ತಮ್ಮ ವ್ಯಾಜ್ಯಗಳನ್ನು ರಾಜೀ ಸಂಧಾನ ಮೂಲಕ ಪರಿಹರಿಸಿಕೊಳ್ಳಬೇಕು. ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿ ಭೇಟಿ ನೀಡಬಹುದು ಎಂದು ಅವರು ತಿಳಿಸಿದರು.
*ಜು.29 ರಿಂದ ಆ.03 ರ ವರೆಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಶೇಷ ಲೋಕ್ ಅದಾಲತ್:*
ಸರ್ವೋಚ್ಚ ನ್ಯಾಯಾಲಯವು ವಿಶೇಷ ಲೋಕ್ ಅದಾಲತ್ ಅನ್ನು ಜುಲೈ 29 ರಿಂದ ಆಗಸ್ಟ್ 03 ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ಪಕ್ಷಕಾರರುಗಳಿಗೆ, ಎದುರುದಾರರ ಜೊತೆ ಪೂರ್ವಭಾವಿ ಲೋಕ್ ಅದಾಲತ್ ಅನ್ನು ನಡೆಸಲು ವಿಡಿಯೋ ಕಾನ್ಸರೆನ್ಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳು ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಇವೆ. ಇವುಗಳನ್ನು ಸಹ ಲೋಕ್ ಅದಾಲತ್‍ನಲ್ಲಿ ರಾಜಿಗೆ ಪರಿಗಣಿಸಲಾಗಿದೆ ಎಂದರು.
*ತೆರಿಗೆ ಪಾವತಿ ಶೇ.5ರಷ್ಟು ವಿನಾಯತಿ:*
ನಗರಸಭೆ ಹಾಗೂ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಜುಲೈ 31 ರೊಳಗೆ ಪಾವತಿಸುವ ಮೂಲಕ ಶೇ 5 ರಷ್ಟು ವಿನಾಯತಿ ಪಡೆಯಬಹುದು ಎಂದು ಅವರು ಹೇಳಿದರು.
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಉಪಸ್ಥಿತರಿದ್ದರು.