ಮಹದಾಯಿ ವಿಚಾರದಲ್ಲಿ ಗೋವಾ ಕ್ಯಾತೆ : ಕನ್ನಡಿಗರನ್ನು ಕೆರಳಿಸಿದ ಸಾವಂತ್​​ ಟ್ವೀಟ್

Ravi Talawar
ಮಹದಾಯಿ ವಿಚಾರದಲ್ಲಿ ಗೋವಾ ಕ್ಯಾತೆ : ಕನ್ನಡಿಗರನ್ನು ಕೆರಳಿಸಿದ ಸಾವಂತ್​​ ಟ್ವೀಟ್
WhatsApp Group Join Now
Telegram Group Join Now

ಬೆಳಗಾವಿ: ಕಳಸಾ – ಬಂಡೂರಿ, ಮಹದಾಯಿ ವಿಚಾರದಲ್ಲಿ ಪದೇ ಪದೆ ಕ್ಯಾತೆ ತೆಗೆಯುವ ಗೋವಾ ಸರ್ಕಾರ ಈಗ ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಗೋವಾ ಸಿಎಂ ಪ್ರಮೋದ್ ಸಾವಂತ್​​ ಟ್ವೀಟ್ ಈಗ ಕನ್ನಡಿಗರನ್ನು ಕೆರಳುವಂತೆ ಮಾಡಿದೆ.

ಹೌದು, ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರ ಇದೇ ಜುಲೈ‌ 7ರಂದು ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಲಿದೆ. ಗೋವಾ ಸರ್ಕಾರದ ಆಗ್ರಹದ ಮೇರೆಗೆ ಕೇಂದ್ರ ಸರ್ಕಾರ ರಚಿಸಿರುವ ಉಭಯ ರಾಜ್ಯಗಳ ಸಂಸ್ಥೆ ಇದು.‌ ಈ ಸಂಬಂಧ ಗೋವಾ ಸಿಎಂ ಪ್ರಮೋದ್​ ಸಾವಂತ್​ ಟ್ವೀಟ್ ಮಾಡಿದ್ದು, ಕರ್ನಾಟಕ ‌ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ವನ್ಯಜೀವಿ, ಪರಿಸರ, ಅರಣ್ಯ ಇಲಾಖೆ ಅನುಮತಿ ಇಲ್ಲದೇ ಕರ್ನಾಟಕ ಕಾಮಗಾರಿ ಆರಂಭಿಸಿದೆ ಎಂದು ದೂರಿದ್ದಾರೆ.

ನದಿ ಮೇಲ್ವಿಚಾರಣೆ ಸಮಿತಿ ಎದುರು ಕರ್ನಾಟಕದ ಕೃತ್ಯ ಬಯಲು ಮಾಡುವುದಾಗಿ ಉಲ್ಲೇಖಿಸಿದ್ದಾರೆ. ಆದರೆ, ಪ್ರಮೋದ್ ಸಾವಂತ್ ಆರೋಪದಲ್ಲಿ ‌ಯಾವುದೇ ಹುರುಳಿಲ್ಲ ಎಂಬುದನ್ನು ಕರ್ನಾಟಕ ಸರ್ಕಾರ ಸಾಬೀತು ಪಡಿಸುವ ಅವಶ್ಯಕತೆಯಿದೆ. ಗೋವಾ ಸಿಎಂ ಇಷ್ಟೆಲ್ಲಾ ಮುತುವರ್ಜಿ ವಹಿಸಿದರೂ ಕರ್ನಾಟಕ ಸರ್ಕಾರ ಮೌನಕ್ಕೆ ಶರಣಾಗಿರೋದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಐದು ದಶಕಗಳಿಂದ ಕಳಸಾ, ಬಂಡೂರಿ ನೀರು ಮಲಪ್ರಭಾ ನದಿಗೆ ಸೇರಬೇಕು ಎನ್ನುವ ಕೂಗಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಯ ಜನರು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ, ಗೋವಾ ಪ್ರತಿ ಸಲ ಒಂದಲ್ಲ ಒಂದು ರೀತಿಯಲ್ಲಿ ಕ್ಯಾತೆ ತೆಗೆಯುತ್ತಲೇ ಇದೆ. 2009ರಲ್ಲಿ ಮಹದಾಯಿ ನ್ಯಾಯಾಧೀಕರಣ ರಚನೆಯಾಗಿ, ಆಗಸ್ಟ್ 14ರ 2018ರಲ್ಲಿ ನ್ಯಾಯಾಧೀಕರಣ ತೀರ್ಪು ಬಂದಿದೆ. ಕರ್ನಾಟಕಕ್ಕೆ 13 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಕಳಸಾ ನಾಲಾದಿಂದ 1.72 ಟಿಎಂಸಿ, ಬಂಡೂರಿಯಿಂದ 2.18. ಟಿಎಂಸಿ ನೀರು, ಜಲ ವಿದ್ಯುತ್ ಯೋಜನೆಗೆ 8 ಟಿಎಂಸಿ ಬಳಸಲು ಮಹತ್ವದ ಆದೇಶ ಸಿಕ್ಕಿದೆ. ನ್ಯಾಯಾಧೀಕರಣ ಆದೇಶ ಬಂದು ಆರು ವರ್ಷ ಕಳೆದರೂ ನೀರು ಮಾತ್ರ ಸಿಕ್ಕಿಲ್ಲ.

ಕೇಂದ್ರದ ಪರಿಸರ, ವನ್ಯಜೀವಿ ಹಾಗೂ ಅರಣ್ಯ ಇಲಾಖೆಯಿಂದ ರಾಜ್ಯಕ್ಕೆ ಅನುಮತಿ ಸಿಕ್ಕಿಲ್ಲ. ಈ ಯೋಜನೆಯಿಂದ 500 ಹೆಕ್ಟೇರ್ ಪ್ರದೇಶದ ಅರಣ್ಯ ನಾಶ ಆಗುತ್ತದೆ ಎಂದು ಗೋವಾ ಆರೋಪಿಸಿದೆ. ಇನ್ನು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಪರಿಷ್ಕೃತ ಯೋಜನಾ ವರದಿ ತಯಾರಿಸಲಾಗಿದ್ದು, ಪೈಪ್ ಲೈನ್ ಮೂಲಕ ಕಾಮಗಾರಿ ಮಾಡಿ ಕೇವಲ 64 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇನ್ನು ಇದಕ್ಕೆ ಪರ್ಯಾಯವಾಗಿ ಅಥಣಿ ತಾಲೂಕಿನ ತೆಲಸಂಗ ಬಳಿ ಅರಣ್ಯ ಬೆಳೆಸುವ ವಾಗ್ದಾನ ಕೂಡ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 1500 ಕೋಟಿ ಅನುದಾನ ಮೀಸಲು ಇಡಲಾಗಿದೆ. ಅರಣ್ಯ, ಪರಿಸರ, ವನ್ಯಜೀವಿ ಮಂಡಳಿ ಅನುಮತಿ ಸಿಗುವ ಮೊದಲೇ ಬಿಜೆಪಿ ಸರ್ಕಾರ ಟೆಂಡರ್ ಕೊಟ್ಟಿತ್ತು.

 

WhatsApp Group Join Now
Telegram Group Join Now
Share This Article